ಟೀಚರ್ಸ್ ಕೋಆಪರೇಟಿವ್ ಬ್ಯಾಂಕ್‌ಗೆ 3.63 ಕೋಟಿ ರೂ. ಲಾಭ
ಉಡುಪಿ : ರಾಜ್ಯದಲ್ಲಿ ಶಿಕ್ಷಕರ ಆಶೋತ್ತರಗಳಿಗೆ ಸಕಾಲದಲ್ಲಿ ಸ್ಪಂಧಿ ಸುತ್ತಿರುವ ಟೀಚರ್ಸ್ ಕೋ-ಆಪರೇಟಿವ್ ಬ್ಯಾಂಕ್ ನಿಯಮಿತ 2021-22ನೇ ಸಾಲಿನಲ್ಲಿ 3.63 ಕೋಟಿ ರೂ.ಲಾಭಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ರಾದ ಅಶೋಕ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶೋಕ್ ಕುಮಾರ್ ಶೆಟ್ಟಿ, ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ 107 ವರ್ಷಗಳ ಸಾರ್ಥಕ ಸೇವೆಯನ್ನು ಪ್ರಮುಖವಾಗಿ ಶಿಕ್ಷಕ ಕ್ಷೇತ್ರದಲ್ಲಿ ನೀಡುತ್ತಾ ಬಂದಿರುವ ಟೀಚರ್ಸ್ ಕೋ-ಆಪರೇಟಿವ್ ಬ್ಯಾಂಕ್ 2022ರ ಮಾ.31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಒಟ್ಟು ೫೬೨.೮೫ ಕೋಟಿ ರೂ.ವ್ಯವಹಾರವನ್ನು ನಡೆಸಿದೆ ಎಂದರು.
ಉಡುಪಿಯಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ಬ್ಯಾಂಕ್ ಸದ್ಯ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಒಟ್ಟು ೧೩ ಶಾಖೆಗಳನ್ನು ಹೊಂದಿದ್ದು ಸದ್ಯ ೧೬,೬೭೮ ಸದಸ್ಯರನ್ನು ಹೊಂದಿದೆ. ಶೀಘ್ರವೇ ಉತ್ತರ ಕನ್ನಡದ ಕುಮಟಾ ಹಾಗೂ ಶಿವಮೊಗ್ಗ ಜಿಲ್ಲೆಯ ಸಾಗರಗಳಲ್ಲಿ ಇನ್ನೆರಡು ಶಾಖೆಗಳನ್ನು ತೆರೆಯಲಿವೆ ಎಂದರು.
ಶಿಕ್ಷಕ ಸಮುದಾಯದವರಿಗೆ ಆಕರ್ಷಕ ಬಡ್ಡಿ ದರದಲ್ಲಿಜಾಮೀನು, ತುರ್ತು, ವಾಹನ, ಗೃಹ, ಅಡಮಾನ ಹಾಗೂ ಚಿನ್ನಾಭರಣಗಳ ಸಾಲವನ್ನು ನೀಡಲಾಗುತಿದ್ದು, ಈ ವರ್ಷದಿಂದ ಶಿಕ್ಷಕರ ಮಕ್ಕಳಿಗೆ ಶಿಕ್ಷಣ ಸಾಲ ನೀಡುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಬ್ಯಾಂಕಿನ ಎಲ್ಲಾ ಸದಸ್ಯರಿಗೂ ಐದು ಲಕ್ಷ ರೂ. ಅಪಘಾತ ಉಚಿತ ವಿಮಾ ಸೌಲಭ್ಯವಿದೆ ಎಂದರು.
12 ಶಾಖೆಗಳಲ್ಲಿ ಎಂಟು ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿ ಸುತ್ತಿದೆ. ಎಲ್ಲಾ ಶಾಖೆಗಳಲ್ಲಿ ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ನೆಫ್ಟ್- ಆರ್‌ಟಿಜಿಎಸ್ ಸೌಲಭ್ಯ ಲಭ್ಯವಿದೆ. ಎಸ್‌ಎಂಎಸ್ ಬ್ಯಾಂಕಿಂಗ್, ಸೇಫ್ ಡಿಪಾಸಿಟ್ ಲಾಕರ್ ಸೌಲಭ್ಯವಿದ್ದು, ಶೀಘ್ರ ಎಟಿಎಂ ಸೌಲಭ್ಯ ಒದಗಿಸಲಾಗುವುದು. ಮುಂದಿನ ದಿನಗಳಲ್ಲಿ ಬ್ಯಾಂಕಿನ ಕಾರ್ಯಕ್ಷೇತ್ರವನ್ನು ಧಾರವಾಡ, ಹಾವೇರಿ, ದಾವಣಗೆರೆ, ಹಾಸನ ಹಾಗೂ ತುಮಕೂರು ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದರು.
ಪ್ರಸ್ತುತ ಬ್ಯಾಂಕ್ 300 ಕೋಟಿ ರೂ. ಠೇವಣಿ ಹಾಗೂ ೨೨೭.೧೮ ಕೋಟಿ ರೂ. ಮುಂಗಡವನ್ನು ಹೊಂದಿದೆ.ಎರಡರಲ್ಲೂ ಕಳೆದ ಸಾಲಿಗಿಂತ ಶೇ.೧೩.೧೫ ಹಾಗೂ ಶೇ.೧೧.೮೮ರಷ್ಟು ಏರಿಕೆಯಾಗಿದೆ. ಬ್ಯಾಂಕಿನ ನಿವ್ವಳ ಎನ್‌ಪಿಎ ಶೇ.೦.೯೧ಕ್ಕೆ ಇಳಿದಿದೆ. ಇದು ಹಿಂದಿನ ವರ್ಷಕ್ಕಿಂತ ಶೇ.೩೭ರಷ್ಟು ಕಡಿಮೆ ಎಂದು ಅಶೋಕ್‌ಕುಮಾರ್ ಶೆಟ್ಟಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ವಿಶ್ವನಾಥ ಶೆಟ್ಟಿ, ನಿರ್ದೇಶಕರಾದ ರಾಘವೇಂದ್ರ ದೇವಾಡಿಗ, ಮಹಾಪ್ರಬಂಧಕ ಮಂಜುನಾಥ ಶೆಟ್ಟಿ ಹಾಗೂ ಶರತ್ ಕೆ. ಶೆಟ್ಟಿ ಉಪಸ್ಥಿತರಿದ್ದರು.