ಬಿಕ್ಕಟ್ಟಿನಲ್ಲಿರುವ ಶ್ರೀಲಂಕಾಕ್ಕೆ ಸಾಧ್ಯವಿರುವ ಎಲ್ಲ ಆರ್ಥಿಕ ನೆರವು ನೀಡುವುದಾಗಿ ನಿರ್ಮಲಾ ಸೀತಾರಾಮನ್ ಭರವಸೆ

Update: 2022-04-19 16:49 GMT

ಹೊಸದಿಲ್ಲಿ, ಎ.19: ಶ್ರೀಲಂಕಾದ ವಿತ್ತಸಚಿವ ಅಲಿ ಸಾಬ್ರಿ ಅವರನ್ನು ಸೋಮವಾರ ವಾಷಿಂಗ್ಟನ್‌ನಲ್ಲಿ ಭೇಟಿಯಾದ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು,ಆಪ್ತ ಸ್ನೇಹಿತ ಮತ್ತು ಉತ್ತಮ ನೆರೆಯ ರಾಷ್ಟ್ರವಾಗಿ ಭಾರತವು ದ್ವೀಪರಾಷ್ಟ್ರಕ್ಕೆ ಈ ಬಿಕ್ಕಟ್ಟಿನ ಸಮಯದಲ್ಲಿ ಸಾಧ್ಯವಿರುವ ಎಲ್ಲ ಸಹಕಾರ ಮತ್ತು ನೆರವನ್ನು ಒದಗಿಸಲು ಪ್ರಯತ್ನಿಸಲಿದೆ ಎಂದು ಭರವಸೆ ನೀಡಿದರು.

ದಿವಾಳಿತನದ ಅಂಚಿನಲ್ಲಿರುವ ಶ್ರೀಲಂಕಾ ಸ್ವಾತಂತ್ರಾನಂತರದ ಅಭೂತಪೂರ್ವ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ.

ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು ವಿಶ್ವ ಬ್ಯಾಂಕ್‌ಗಳ ವಾರ್ಷಿಕ ವಸಂತಋತು ಸಭೆಗಳಲ್ಲಿ ಭಾಗಿಯಾಗಲು ವಾಷಿಂಗ್ಟನ್‌ನಲ್ಲಿರುವ ಸೀತಾರಾಮನ್ ಅವರು,ಪ್ರಸಕ್ತ ಆರ್ಥಿಕ ಸ್ಥಿತಿಯನ್ನು ಮತ್ತು ಶ್ರೀಲಂಕಾದಲ್ಲಿಯ ಹಾಲಿ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಭಾರತದ ಕ್ರಮಗಳ ಬಗ್ಗೆ ಚರ್ಚಿಸಿದರು ಎಂದು ವಿತ್ತ ಸಚಿವಾಲಯವು ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.

ಶ್ರೀಲಂಕಾ ತನ್ನ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನ ಸುಳಿಯಲ್ಲಿ ಸಿಲುಕಿದ್ದು,ಬಿಕ್ಕಟ್ಟನ್ನು ಎದುರಿಸುವಲ್ಲಿ ಸರಕಾರದ ವೈಫಲ್ಯದ ವಿರುದ್ಧ ದೇಶಾದ್ಯಂತ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ.

ಕಳೆದ ಕೆಲವು ತಿಂಗಳುಗಳಿಂದ ಶ್ರೀಲಂಕಾದ ಪ್ರಜೆಗಳು ತೀವ್ರ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಇಂಧನ,ಅಡಿಗೆ ಅನಿಲ ಮತ್ತು ಅಗತ್ಯ ಸಾಮಗ್ರಿಗಳ ತೀವ್ರ ಕೊರತೆಯಿದ್ದು,ಅವುಗಳಿಗಾಗಿ ಉದ್ದನೆಯ ಸರದಿ ಸಾಲುಗಳಲ್ಲಿ ಕಾಯುವಂತಾಗಿದೆ. ಗಂಟೆಗಟ್ಟಲೆ ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸಲಾಗುತ್ತಿದೆ.

ಆರ್ಥಿಕ ಬಿಕ್ಕಟ್ಟು ಮತ್ತು ವಿದೇಶಿ ವಿನಿಮಯದ ಕೊರತೆಯಿಂದಾಗಿ ಸಂಕಷ್ಟದಲ್ಲಿರುವ ಶ್ರೀಲಂಕಾಕ್ಕೆ ಇಂಧನಗಳ ಆಮದಿಗಾಗಿ ಭಾರತವು ಫೆಬ್ರವರಿಯಲ್ಲಿ 500 ಮಿ.ಡಾ.ಗಳ ಸಾಲವನ್ನು ನೀಡಿತ್ತು. ಅಲ್ಲದೆ ಇನ್ನೂ ಒಂದು ಬಿಲಿಯ ಡಾ.ಗಳ ಸಾಲಸೌಲಭ್ಯವನ್ನು ಒದಗಿಸುವುದಾಗಿ ಅದು ಇತ್ತೀಚಿಗೆ ಪ್ರಕಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News