ಉ.ಪ್ರ.ದಲ್ಲಿ ಅನುಮತಿ ಇಲ್ಲದೆ ಧಾರ್ಮಿಕ ಮೆರವಣಿಗೆ ನಡೆಸುವಂತಿಲ್ಲ: ಆದಿತ್ಯನಾಥ್

Update: 2022-04-19 17:34 GMT

ಲಕ್ನೋ, ಎ. 19: ದೇಶದ ವಿವಿಧ ಭಾಗಗಳಲ್ಲಿ ಉತ್ಸವಗಳ ಸಂದರ್ಭ ನಡೆದ ಕೋಮು ಘರ್ಷಣೆಯ ನಡುವೆ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್, ರಾಜ್ಯದಲ್ಲಿ ಅನುಮತಿ ಇಲ್ಲದೆ ಧಾರ್ಮಿಕ ಮೆರವಣಿಗೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಸೋಮವಾರ ಹೇಳಿದ್ದಾರೆ. ಮೆರವಣಿಗೆಗೆ ಅನುಮತಿ ನೀಡುವ ಮುನ್ನ ಶಾಂತಿ ಹಾಗೂ ಸೌಹಾರ್ದ ಕಾಪಾಡಲಾಗುವುದು ಎಂದು ಆಯೋಜಕರಿಂದ ಅಫಿಡಾವಿಟ್ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಕಚೇರಿ ಟ್ವಿಟರ್‌ನಲ್ಲಿ ಹೇಳಿದೆ.

ಸಾಂಪ್ರದಾಯಿಕವಾದ ಧಾರ್ಮಿಕ ಮೆರವಣಿಗೆಗಳಿಗೆ ಮಾತ್ರ ಅನುಮತಿ ನೀಡಬೇಕು. ಹೊಸ ಮೆರವಣಿಗೆಗಳಿಗೆ ಅನಗತ್ಯವಾಗಿ ಅನುಮತಿ ನೀಡಬಾರದು ಎಂದು ಟ್ವೀಟ್ ಹೇಳಿದೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಚರ್ಚೆ ನಡೆಸಲು ಆದಿತ್ಯನಾಥ್ ಅವರು ಸೋಮವಾರ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು.

ಮೇಯಲ್ಲಿ ಈದ್ ಹಾಗೂ ಅಕ್ಷಯ ತೃತೀಯ ಒಂದೇ ದಿನದಂದು ನಡೆಯಲಿರುವ ಹಾಗೂ ಅದರೊಂದಿಗೆ ಮುಂದಿನ ಕೆಲವು ದಿನಗಳಲ್ಲಿ ಸಾಲು ಸಾಲಾಗಿ ಹಬ್ಬಗಳು ಬರುವ ಹಿನ್ನೆಲೆಯಲ್ಲಿ ಆದಿತ್ಯನಾಥ್ ಪೊಲೀಸರಿಗೆ ಮುನ್ನೆಚ್ಚರಿಕೆ ನೀಡಿದ್ದಾರೆ.

ಕಿಡಿಗೇಡಿ ಹೇಳಿಕೆ ನೀಡುತ್ತಿರುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಮುಖ್ಯಮಂತ್ರಿ ಕಚೇರಿಯ ಇನ್ನೊಂದು ಟ್ವೀಟ್ ಹೇಳಿದೆ. ಶಾಂತಿಯ ವಾತಾವರಣಕ್ಕೆ ಅಡ್ಡಿ ಉಂಟು ಮಾಡಲು ಯತ್ನಿಸುತ್ತಿರುವ ಅರಾಜಕತಾವಾದಿಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಿ. ನಾಗರಿಕ ಸಮಾಜದಲ್ಲಿ ಅಂತಹ ಜನರಿಗೆ ಸ್ಥಾನ ಇಲ್ಲ ಎಂದು ಟ್ವೀಟ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News