ಮಾಲೆಗಾಂವ್ ಸ್ಫೋಟ ಸಂತ್ರಸ್ತನ ತಂದೆಯಿಂದ ನ್ಯಾಯಾಧೀಶರ ವರ್ಗಾವಣೆ ನಡೆಸದಂತೆ ಮನವಿ

Update: 2022-04-20 08:27 GMT

ಹೊಸದಿಲ್ಲಿ: ಬಾಂಬೆ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗೆ  ಪತ್ರ ಬರೆದಿರುವ 2008 ಮಾಲೆಗಾಂವ್ ಸ್ಫೋಟ ಪ್ರಕರಣದ ಸಂತ್ರಸ್ತರಲ್ಲೊಬ್ಬರ ತಂದೆ, ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಧೀಶರ ಸೇವಾವಧಿಯನ್ನು ವಿಚಾರಣೆ ಪೂರ್ಣಗೊಳಿಸುವ ತನಕ ವಿಸ್ತರಿಸಬೇಕೆಂದು ಕೋರಿದ್ದಾರೆ.

ಸ್ಫೋಟದಲ್ಲಿ ಮೃತಪಟ್ಟ ಆರು ಮಂದಿಯಲ್ಲಿ ಒಬ್ಬರಾಗಿದ್ದ ನಿಸಾರ್ ಅಹ್ಮದ್ ಸಯೀದ್ ಬಿಲಾಲ್ ಅವರ ತಂದೆ ಸಯೀದ್ ಅಝರ್ ಅವರು ಎಪ್ರಿಲ್ 16ರಂದು ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ. ವಿಶೇಷ ನ್ಯಾಯಾಧೀಶರಾದ ಪಿ ಆರ್ ಸಿತ್ರೆ ಅವರು ಈ ಪ್ರಕರಣದ ವಿಚಾರಣೆಯನ್ನು 2020ರಲ್ಲಿ ವಹಿಸಿಕೊಂಡಂದಿನಿಂದ ನಡೆಸುತ್ತಿದ್ದಾರೆ ಹಾಗೂ ಆರೋಪಿಗಳು ವಿಚಾರಣೆಯನ್ನು ಉದ್ದಕ್ಕೆ ಎಳೆಯಲು ಮಾಡುತ್ತಿರುವ ಯತ್ನಗಳ ಮೇಲೆ ನಿಗಾ ಇರಿಸಿದ್ದಾರೆ ಎಂದು ಹೇಳಿದ್ದಾರೆ.

ಸಿತ್ರೆ ಅವರಿಗಿಂತ ಮುಂಚೆ ವಿಶೇಷ ನ್ಯಾಯಾಧೀಶರಾಗಿದ್ದ ವಿ ಎಸ್ ಪಡಲ್ಕರ್ ಅವರ ಸೇವಾವಧಿಯಲ್ಲಿ 140 ಸಾಕ್ಷಿಗಳ ವಿಚಾರಣೆ ನಡೆಸಲಾಗಿದ್ದರೆ ಸಿತ್ರೆ ಅವರು ಸುಮಾರು 100 ಸಾಕ್ಷಿಗಳ ವಿಚಾಣೆ ನಡೆಸಿದ್ದಾರೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಬಾಂಬೆ ಹೈಕೋರ್ಟ್ ತನ್ನ ವಾರ್ಷಿಕ ಸಾಮಾನ್ಯ ವರ್ಗಾವಣೆ ಆದೇಶಗಳಲ್ಲಿ ಈ ವರ್ಷ ಸಿತ್ರೆ ಅವರನ್ನು ಮುಂಬೈಯಿಂದ ಅಹ್ಮದ್‍ನಗರಕ್ಕೆ  ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿ ಮೇಲಿನ ಪತ್ರ ಬರೆಯಲಾಗಿದೆ.

ಹೊಸ ನ್ಯಾಯಾಧೀಶರ ನೇಮಕಗೊಂಡಲ್ಲಿ ಈ ಪ್ರಕರಣದ ಹಲವಾರು ಕಡತಗಳನ್ನು ಮತ್ತೆ ಪರಾಮರ್ಶಿಸಲು ಅವರಿಗೆ ಸಮಯ ಬೇಕಾಗಿರುವುದರಿಂದ ಮತ್ತೆ ಈ 14 ವರ್ಷ ಹಳೆಯ ಪ್ರಕರಣದ ವಿಚಾರಣೆ ವಿಳಂಬಗೊಳ್ಳಬಹುದೆಂದು ಪತ್ರದಲ್ಲಿ ವಿವರಿಸಲಾಗಿದೆ.

ರಾಷ್ಟ್ರೀಯ ತನಿಖಾ ಏಜನ್ಸಿಯು ಈ ಪ್ರಕರಣದ ವಿಚಾರಣೆಯನ್ನು ವಿಳಂಬಗೊಳಿಸಲು ಸರ್ವರೀತಿಯ ಪ್ರಯತ್ನ ನಡೆಸಿದೆ ಎಂದೂ ಪತ್ರದಲ್ಲಿ ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News