×
Ad

ಹಿಂದೂ ಅಲ್ಲದವರಿಗೆ ಚಾರ್‌ಧಾಮ್‌ ಗಳಿಗೆ ನಿರ್ಬಂಧ: ಹಿಂದುತ್ವ ನಾಯಕನ ಮನವಿ ಬಳಿಕ ಪರಿಶೀಲನೆ ಭರವಸೆ ನೀಡಿದ ಸಿಎಂ

Update: 2022-04-20 15:39 IST

ಹೊಸದಿಲ್ಲಿ: ಹಿಂದು ಧಾರ್ಮಿಕ ನಾಯಕರನ್ನೊಳಗೊಂಡ ಶಂಕರಾಚಾರ್ಯ ಪರಿಷದ್ ಅಧ್ಯಕ್ಷ ಆನಂದ್ ಸ್ವರೂಪ್ ಅವರು ಇತ್ತೀಚೆಗೆ ಉತ್ತರಾಖಂಡ ಮುಖ್ಯಮಂತ್ರಿ  ಪುಷ್ಕರ್ ಸಿಂಗ್ ಧಾಮಿ ಅವರಿಗೆ ಪತ್ರ ಬರೆದು ಚಾರ್ ಧಾಮ್ ಧಾರ್ಮಿಕ ಕ್ಷೇತ್ರಗಳಿಗೆ ಹಿಂದೂಯೇತರರಿಗೆ ಪ್ರವೇಶ ನಿರ್ಬಂಧಿಸಬೇಕೆಂದು ಹಾಗೂ ಈ ಚಾರ್ ಧಾಮ್  ಸುತ್ತಲೂ ಮುಸ್ಲಿಮರಿಗೆ ವ್ಯಾಪಾರ ನಡೆಸದಂತೆ ನಿರ್ಬಂಧ ಹೇರಬೇಕೆಂದು ಕೋರಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ, ಚಾರ್ ಧಾಮ್ ಯಾತ್ರಾಗೆ ಹೊರಗಿನ ಸ್ಥಳಗಳಿಂದ ಆಗಮಿಸುವವರಲ್ಲಿ ಯಾರೂ ರಾಜ್ಯದ ಶಾಂತಿಗೆ ಭಂಗ ಉಂಟುಮಾಡದಂತೆ ತಡೆಯಲು ಅವರು ಸೂಕ್ತ ಪರಿಶೀಲನೆಗೆ ಒಳಗಾಗಬೇಕು ಎಂದು ಹೇಳಿದ್ದಾರೆ.

ಉತ್ತರಾಖಂಡದಾದ್ಯಂತ ನೆಲೆಸಿರುವ ಇತರ ರಾಜ್ಯಗಳ ಜನರ ಗುರುತುಗಳನ್ನು ಪರಿಶೀಲಿಸಲು ರಾಜ್ಯಾದ್ಯಂತ ಅಭಿಯಾನ ನಡೆಸುವ ಕುರಿತೂ ಅವರು ಮಾತನಾಡಿದರು.

ಚಾರ್ ಧಾಮ್‍ಗಳಾದ ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಮತ್ತು ಬದರೀನಾಥ ಹಿಂದುಗಳಿಗೆ ಪವಿತ್ರ ಸ್ಥಳವಾಗಿದ್ದು ಪ್ರತಿ ವರ್ಷ ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ಆದರೆ ರಾಜ್ಯದ ಪವಿತ್ರ ಸ್ಥಳಗಳಿಗೆ ಉದ್ಯೋಗಕ್ಕಾಗಿ ಮತ್ತು ವ್ಯಾಪಾರ ನಡೆಸುವ ನೆಪದಲ್ಲಿ ಬಂದು ಹಿಂದೂಯೇತರರು ರಾಜ್ಯದಲ್ಲಿ ನೆಲೆಯೂರುತ್ತಿದ್ದಾರೆ ಎಂದು ಆನಂದ್ ಸ್ವರೂಪ್ ಅವರು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದರು.

ಮಂಗಳವಾರ ಈ ಕುರಿತು ಸುದ್ದಿಗಾರರು ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಉತ್ತರಾಖಂಡ ಒಂದು ಶಾಂತಿಪ್ರಿಯ ರಾಜ್ಯ ಇಲ್ಲಿ ಹಿಂಸಾಕೋರರಿಗೆ, ಅತಿಕ್ರಮಣಕಾರರಿಗೆ ಹಾಗೂ ಧಾರ್ಮಿಕ ಭಾವನೆಗಳನ್ನು ಕೆರಳಿಸುವವರಿಗೆ ಅವಕಾಶವಿಲ್ಲ ಎಂದು ಹೇಳಿದರು.

ಈ ವರ್ಷದ ಚಾರ್ ಧಾಮ್ ಯಾತ್ರಾ ಮೇ ತಿಂಗಳ ಮೊದಲ ವಾರ ಆರಂಭಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News