ಯುಎಇ: ಪ್ರವೇಶ ವೀಸಾ ಮತ್ತು ನಿವಾಸ ಯೋಜನೆ ಪರಿಷ್ಕರಣೆ‌; ಇಲ್ಲಿದೆ ಸಂಪೂರ್ಣ ವಿವರ

Update: 2022-04-20 15:38 GMT
ಸಾಂದರ್ಭಿಕ ಚಿತ್ರ

ಅಬುಧಾಬಿ, ಎ.20: ಪ್ರವೇಶ ವೀಸಾ ಮತ್ತು ದೀರ್ಘಾವಧಿ ನಿವಾಸ ಯೋಜನೆಯನ್ನು ಪರಿಷ್ಕರಿಸಿದ್ದು ಇದೀಗ ಸರಳೀಕೃತ ಪ್ರಕ್ರಿಯೆಯೊಂದಿಗೆ ವಿವಿಧ ರೀತಿಯ ಪ್ರವೇಶ ವೀಸಾ ಪಡೆಯಲು ಸಾಧ್ಯವಿದೆ ಎಂದು ಯುಎಇ ಸರಕಾರ ಹೇಳಿದೆ.

 ಜಾಗತಿಕ ಪ್ರತಿಭೆಗಳನ್ನು ಉಳಿಸಿಕೊಳ್ಳುವ ಮತ್ತು ಆಕರ್ಷಿಸುವ, ಉದ್ಯೋಗ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆ ಮತ್ತು ನಮ್ಯತೆ(ಫ್ಲೆಕ್ಸಿಬಿಲಿಟಿ)ಯನ್ನು ಹೆಚ್ಚಿಸುವ ಹಾಗೂ ರಾಷ್ಟ್ರದ ನಿವಾಸಿಗಳಲ್ಲಿ ಸ್ಥಿರತೆಯ ಪ್ರಜ್ಞೆಯನ್ನು ಬೆಳೆಸುವ ಉದ್ದೇಶದಿಂದ ಹೊಸ ನಿಯಮ ಜಾರಿಗೊಳಿಸಲಾಗಿದೆ. ವಿಸ್ತರಿತ ತಿದ್ದುಪಡಿ ಹೆಚ್ಚಿನ ಪ್ರಯೋಜನ ಮತ್ತು ಸುಲಭವಾಗಿ ಪೂರೈಸಬಹುದಾದ ಅವಶ್ಯಕತೆಗಳನ್ನು ಹೊಂದಿರುವ ವಿವಿಧ ರೀತಿಯ ಪ್ರವೇಶ ವೀಸಾಗಳನ್ನು ಒದಗಿಸಲಿದೆ. ಹೊಸ ಯೋಜನೆಯಡಿ, ವೀಸಾಗೆ ಯಾವುದೇ ಪ್ರಾಯೋಜಕರು ಅಥವಾ ಆತಿಥೇಯರ ಅಗತ್ಯವಿಲ್ಲ ಎಂದು ಸರಕಾರ ಹೇಳಿದೆ. ‌

ಯುಎಇ ಸರಕಾರ ಹೊಸದಾಗಿ ನವೀಕರಿಸಿದ ವೀಸಾ ಯೋಜನೆಗಳ ವಿವರ ಹೀಗಿದೆ:

  ಗೋಲ್ಡನ್ ವೀಸಾ: 10 ವರ್ಷದ ದೀರ್ಘಾವಧಿಯ ನಿವಾಸ ವೀಸಾ ಯೋಜನೆಯಿದು. ಅಸಾಧಾರಣ ಪ್ರತಿಭೆಗಳು, ಹೂಡಿಕೆದಾರರು, ಅಸಾಧಾರಣ ಪ್ರತಿಭೆಯ ವಿದ್ಯಾರ್ಥಿಗಳು ಮತ್ತು ಪದವೀಧರರು, ಉದ್ಯಮಿಗಳು, ಮಾನವೀಯ ಪ್ರವರ್ತಕರು, ವಿಜ್ಞಾನಿಗಳು, ವೃತ್ತಿಪರ ಮತ್ತು ಮುಂಚೂಣಿ ನಾಯಕರಿಗೆ ಇದನ್ನು ಒದಗಿಸಲಾಗುತ್ತದೆ. ಗೋಲ್ಡನ್ ರೆಸಿಡೆನ್ಸಿ ವೀಸಾ ಹೊಂದಿದವರು, ಯಾವುದೇ ವಯಸ್ಸಿನ ತಮ್ಮ ಕುಟುಂಬದ ಸದಸ್ಯರಿಗೆ ಪ್ರಾಯೋಜಕತ್ವ ವಹಿಸಲು ಅವಕಾಶವಿದೆ. ಅಲ್ಲದೆ ಯಾವುದೇ ಮಿತಿಯಿಲ್ಲದೆ ಸಹಾಯಕ ಸೇವೆಯ ಕಾರ್ಮಿಕರನ್ನೂ (ಗೃಹ ಕಾರ್ಮಿಕರು) ಪ್ರಾಯೋಜಿಸಲು ಅವಕಾಶವಿದೆ. ವೀಸಾದ ಮಾನ್ಯತೆ ಉಳಿಸಿಕೊಳ್ಳಲು ಯುಎಇಯಿಂದ ಹೊರಗೆ ಉಳಿಯುವ ಗರಿಷ್ಟ ಅವಧಿಗೆ ಸಂಬಂಧಿಸಿದ ಯಾವುದೇ ನಿರ್ಬಂಧಗಳಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

 5 ವರ್ಷದ ಗ್ರೀನ್ ವೀಸಾ: ಪ್ರತಿಭಾವಂತ, ನುರಿತ ವೃತ್ತಿಪರರಿಗೆ, ಸ್ವತಂತ್ರ ಉದ್ಯೋಗಿಗಳಿಗೆ, ಹೂಡಿಕೆದಾರರಿಗೆ ಮತ್ತು ಉದ್ಯಮಿಗಳಿಗೆ ಇದನ್ನು ನೀಡಲಾಗುತ್ತದೆ. ನಿವಾಸ ಪರವಾನಿಗೆ ರದ್ದಾದ ಅಥವಾ ಅವಧಿ ತೀರಿದ ಬಳಿಕವೂ ಹೆಚ್ಚುವರಿಯಾಗಿ ಗರಿಷ್ಟ 6 ತಿಂಗಳು ಯುಎಇಯಲ್ಲಿ ಉಳಿದುಕೊಳ್ಳಲು ಇದರಲ್ಲಿ ಅವಕಾಶವಿದೆ. ಹೊಸ ನಿಯಮದಡಿ, ಸ್ವತಂತ್ರ ಉದ್ಯೋಗ ಅಥವಾ ಸ್ವೋದ್ಯೋಗದ ಪರ್ಮಿಟ್ ಇದ್ದವರು ಯಾವುದೇ ಪ್ರಾಯೋಜಕರು ಅಥವಾ ಉದ್ಯೋಗದಾತರ ದಾಖಲೆ ಒದಗಿಸದೆ 5 ವರ್ಷದ ನಿವಾಸ ವೀಸಾ ಪಡೆಯಬಹುದು.

ಪ್ರವೇಶ ವೀಸಾ: ಯುಎಇಗೆ ಬೇರೆ ಬೇರೆ ಕಾರಣಗಳಿಗೆ ಭೇಟಿ ನೀಡುವವರಿಗೆ ಒದಗಿಸುವ ವಿವಿಧ ಪ್ರವೇಶ ವೀಸಾಗಳಿವು. ಇದೇ ಮೊದಲ ಬಾರಿಗೆ ಆತಿಥೇಯರು ಅಥವಾ ಪ್ರಾಯೋಜಕರಿಲ್ಲದೆ ಪ್ರವೇಶ ವೀಸಾ ಒದಗಿಸಲಾಗುತ್ತಿದೆ. ಉದ್ಯೋಗ, ವ್ಯವಹಾರ, ಪ್ರವಾಸೋದ್ದಿಮೆ, ಸಂದರ್ಶನ, ಅಧ್ಯಯನ ಅಥವಾ ತಾತ್ಕಾಲಿಕ ಕೆಲಸಕ್ಕೆ ಯುಎಇ ಪ್ರವೇಶಿಸುವವರಿಗೆ ಈ ಯೋಜನೆ ರೂಪಿಸಲಾಗಿದೆ ಎಂದು ಸರಕಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News