ಅಗಾಧ ಸೌರ ಜ್ವಾಲೆ ಹೊರ ಸೂಸಿದ ಸೂರ್ಯ: ಉಪಗ್ರಹ ಸಂವಹನದ ಮೇಲೆ ಪರಿಣಾಮ ಸಾಧ್ಯತೆ; ಸಿಇಎಸ್ಎಸ್ಐ
ಹೊಸದಿಲ್ಲಿ, ಎ. 20: ಸೂರ್ಯ ಬುಧವಾರ ಅಗಾಧವಾದ ಸೌರ ಜ್ವಾಲೆಯನ್ನು ಹೊರ ಸೂಸಿದೆ. ಇದರಿಂದ ಉಪಗ್ರಹ ಸಂವಹನ ಹಾಗೂ ಗ್ಲೋಬಲ್ ಪೊಸಿಸನಿಂಗ್ ಸಿಸ್ಟಮ್ಸ್ (ಜಿಪಿಎಸ್) ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಸೆಂಟರ್ ಆಫ್ ಎಕೆಲೆನ್ಸ್ ಇನ್ ಸ್ಟೇಸ್ ಸಯನ್ಸಸ್ ಇಂಡಿಯಾ (ಸಿಇಎಸ್ಎಸ್ಐ) ಹೇಳಿದೆ.
ಎಕ್ಸ್2.2 ವರ್ಗದ ಸೌರ ಜ್ವಾಲೆಯ ಹೊರ ಸೂಸುವಿಕೆಯು ಸೌರ ಕಾಂತೀಯ ಸಕ್ರಿಯ ವಲಯ ಎಆರ್12992ರಲ್ಲಿ ಸಂಭವಿಸಿದೆ ಎಂದು ಕೋಲ್ಕತ್ತಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸಯನ್ಸ್ ಎಜುಕೇಶನ್ ಆ್ಯಂಡ್ ರಿಸರ್ಚ್ನಲ್ಲಿರುವ ಸಿಇಎಸ್ಎಸ್ಐಯ ಸಹಾಯಕ ಪ್ರಾಧ್ಯಾಪಕ ಹಾಗೂ ಸಂಘಟಕ ದಿವ್ಯೇಂದು ನಂದಿ ತಿಳಿಸಿದ್ದಾರೆ. ಸೌರ ಜ್ವಾಲೆ ರೇಡಿಯೊ ಸಂವಹನಗಳು, ವಿದ್ಯುಚ್ಛಕ್ಕಿ ಗ್ರಿಡ್ಗಳು, ನಾವಿಕ ಸಂಕೇತಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವ ಶಕ್ತಿಶಾಲಿ ಸ್ಫೋಟಗಳು. ಅಲ್ಲದೆ, ಇದು ಬಾಹ್ಯಾಕಾಶ ನೌಕೆ ಹಾಗೂ ಗಗನ ಯಾತ್ರಿಗಳಿಗೆ ಅಪಾಯ ಒಡ್ಡಲಿದೆ. ಈ ಜ್ವಾಲೆಯನ್ನು ಎಕ್ಸ್ ವರ್ಗ ಎಂದು ವರ್ಗೀಕರಿಸಲಾಗಿದೆ. ಇದು ಅತ್ಯಂತ ತೀವ್ರ ಜ್ವಾಲೆಗಳನ್ನು ಸೂಚಿಸುತ್ತದೆ. ಈ ಸಂಖ್ಯೆ ಅದರ ಶಕ್ತಿಯ ಕುರಿತು ಹೆಚ್ಚಿನ ಮಾಹಿತಿ ನೀಡುತ್ತದೆ.
ಅಯಾನುಗೋಳದ ತೀವ್ರ ಪ್ರಕ್ಷುಬ್ದತೆ ಭಾರತ, ಆಗ್ನೇಯ ಎಷಿಯಾ ಹಾಗೂ ಏಷಿಯಾ-ಪೆಸಿಫಿಕ್ ವಲಯದಲ್ಲಿ ನಡೆಯುತ್ತಿದೆ. ಇದರಿಂದ ಅತ್ಯಧಿಕ ಆವರ್ತನದ ಸಂಹವನ ಬ್ಲಾಕೌಟ್, ಉಪಗ್ರಹ ವೈಪರಿತ್ಯ, ಜಿಪಿಎಸ್ಗಳು ಬೆಳಕು ಸೂಸುವ ಹಾಗೂ ವಿಮಾನ ಯಾನ ಸಂವಹನದ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಸಿಇಎಸ್ಎಸ್ಐ ಟ್ವಿಟ್ಟರ್ನಲ್ಲಿ ಹೇಳಿದೆ. ಎಕ್ಸ್ ವರ್ಗದ ಜ್ವಾಲೆ ಎಪ್ರಿಲ್ 18ರಂದು ಹೊರ ಸೂಸಲಿದೆ ಎಂದು ಸಿಇಎಸ್ಎಸ್ಐ ನಿರೀಕ್ಷಿಸಿತ್ತು. ಈ ಜ್ವಾಲೆಯ ಪರಿಣಾಮದ ಬಗ್ಗೆ ಸಿಇಎಸ್ಎಸ್ಐಯ ವಿಜ್ಞಾನಿಗಳು ಅಧ್ಯಯನ ನಡೆಸುತ್ತಿದ್ದಾರೆ ಎಂದು ನಂದಿ ಹೇಳಿದ್ದಾರೆ