×
Ad

'ಗಡಿಪಾರು' ಆಗಿರುವ ನವಾಝ್‌ ಶರೀಫ್ ಈದ್ ಬಳಿಕ ವಾಪಾಸು

Update: 2022-04-21 08:01 IST

ಇಸ್ಲಾಮಾಬಾದ್: ಮೂರು ಬಾರಿ ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಝ್‌ ಶರೀಫ್, ಈದ್ ಬಳಿಕ ದೇಶಕ್ಕೆ ವಾಪಸ್ಸಾಗಿ, ತಮ್ಮ ವಿರುದ್ಧದ ಪ್ರಕರಣಗಳಿಗಾಗಿ ನ್ಯಾಯಾಂಗ ಪ್ರಕ್ರಿಯೆಯನ್ನು ಸ್ವಯಂಪ್ರೇರಿತರಾಗಿ ಎದುರಿಸಲಿದ್ದಾರೆ ಎಂದು ಫೆಡರಲ್ ಸಚಿವ ಮತ್ತು ಪಿಎಂಎಲ್-ಎಲ್ ಮುಖಂಡ ಜಾವೇದ್ ಲತೀಫ್ ಹೇಳಿದ್ದಾರೆ.

ಪಕ್ಷದ ಅಧ್ಯಕ್ಷ ಬಿಲಾವಲ್ ಭುಟ್ಟೊ ಝರ್ದಾರಿ ಅವರನ್ನು ಖಾಲಿ ಇರುವ ವಿದೇಶಾಂಗ ಸಚಿವ ಹುದ್ದೆಗೆ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಸೂಚಿಸಿದೆ ಎಂದೂ ಅವರು ಈ ಸಂದರ್ಭದಲ್ಲಿ ಪ್ರಕಟಿಸಿದರು.

ಲಂಡನ್‍ನಿಂದ ಆಗಮಿಸಿದ ತಕ್ಷಣ ಅವರು ಪ್ರಮಾಣವಚನ ಸ್ವೀಕರಿಸುವರು ಎಂದು ಲತೀಫ್ ವಿವರಿಸಿದರು.

ಪನಾಮಾ ದಾಖಲೆಗಳ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನಿರ್ಧಾರದಂತೆ ರಾಜೀನಾಮೆ ನೀಡುವುದು ಅನಿವಾರ್ಯವಾದ ಹಿನ್ನೆಲೆಯಲ್ಲಿ ನವಾಝ್‌ ಶರೀಫ್ ಅವರ ಅಧಿಕಾರಾವಧಿ 2017ರಲ್ಲಿ ಮುಕ್ತಾಯವಾಗಿತ್ತು. ಹಲವು ಅಸ್ವಸ್ಥತೆಗಳಿಗೆ ಚಿಕಿತ್ಸೆ ಪಡೆಯುವ ಸಲುವಾಗಿ 2019ರ ನವೆಂಬರ್ ನಲ್ಲಿ ಅವರು ಲಂಡನ್‍ಗೆ ತೆರಳಿದ್ದರು.

"ನವಾಝ್‌ ಶರೀಫ್ ಅವರನ್ನು ಈದ್ ಬಳಿಕ ಪಾಕಿಸ್ತಾನದಲ್ಲಿ ಕಾಣಬಹುದು" ಎಂದು 37 ಸದಸ್ಯರ ಶೆಹನಾಬ್ ಶರೀಫ್ ಸಂಪುಟ ಅಧಿಕಾರ ಸ್ವೀಕರಿಸಿದ ಮರುದಿನ ನೀಡಿದ ವೀಡಿಯೊ ಹೇಳಿಕೆಯಲ್ಲಿ ಲತೀಫ್ ಸ್ಪಷ್ಟಪಡಿಸಿದ್ದಾರೆ.

ನವಾಝ್‌ ಶರೀಫ್ ವಿರುದ್ಧ ಬಾಕಿ ಇರುವ ಪ್ರಕರಣಗಳ ಬಗ್ಗೆ ಉಲ್ಲೇಖಿಸಿ, "ಕಾನೂನು ಪ್ರಕ್ರಿಯೆಗಳ ಪಾವಿತ್ರ್ಯದ ಬಗ್ಗೆ ಪಿಎಂಎಲ್-ಎನ್‍ಗೆ  ನಂಬಿಕೆ ಇದೆ. ನ್ಯಾಯಾಲಯ ನೀಡುವ ಯಾವುದೇ ತೀರ್ಪನ್ನು ಪಕ್ಷ ಒಪ್ಪಿಕೊಳ್ಳಲಿದೆ" ಎಂದು ಹೇಳಿದ್ದಾರೆ.

ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿರುವ ಹಿನ್ನೆಲೆಯಲ್ಲಿ ನವಾಝ್‌ ಶರೀಫ್ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸುವ ಸಲುವಾಗಿ ಬಿಲಾವಲ್ ಲಂಡನ್‍ಗೆ ತೆರಳಿದ್ದಾರೆ ಎಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಪ್ರಧಾನ ಕಾರ್ಯದರ್ಶಿ ಫರ್ಹಾತುಲ್ಲಾ ಬಾಬರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News