ಒಂದು ನೊಣವೂ ತಪ್ಪಿಸಿಕೊಳ್ಳಬಾರದು: ಮರಿಯುಪೋಲ್ ‘ವಿಮೋಚನೆʼ ಬಳಿಕ ಪುಟಿನ್ ಆದೇಶ

Update: 2022-04-21 17:53 GMT

ಕೀವ್, ಎ.21: ಉಕ್ರೇನ್ ನ ಆಯಕಟ್ಟಿನ ಬಂದರು ನಗರ ಮರಿಯುಪೋಲ್ ವಿಮೋಚನೆ ಪ್ರಕ್ರಿಯೆ ಕಡೆಗೂ ಯಶಸ್ವಿಯಾಗಿದೆ ಎಂದು ಗುರುವಾರ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪ್ರತಿಪಾದಿಸಿದ್ದು, ಆ ನಗರದಲ್ಲಿ ಇನ್ನೂ ಅಲ್ಲಲ್ಲಿ ಗುಂಡಿನ ದಾಳಿ ನಡೆಸುತ್ತಿರುವ ಬೆರಳೆಣಿಕೆಯಷ್ಟು ಉಕ್ರೇನ್ ಯೋಧರಿಗೆ ಅಂತಿಮ ಮಾರಕ ಪ್ರಹಾರ ನೀಡುವಂತೆ ತನ್ನ ಪಡೆಗಳಿಗೆ ಆದೇಶ ರವಾನಿಸಿದ್ದಾರೆ.

   ಆ ನಗರದಿಂದ ಒಂದು ನೊಣವೂ ಹೊರನುಸುಳಬಾರದು ಎಂದು ಪುಟಿನ್ ರಶ್ಯ ಯೋಧರಿಗೆ ಕಟ್ಟುನಿಟ್ಟಿನ ಆದೇಶ ರವಾನಿಸಿದ್ದಾರೆ. ಮರಿಯುಪೋಲ್ ಮೇಲೆ ಕಳೆದ ಸುಮಾರು 2 ತಿಂಗಳಿಂದ ರಶ್ಯ ಸೇನೆ ಮುತ್ತಿಗೆ ಹಾಕಿತ್ತು. ಉಕ್ರೇನ್ ಸೇನೆಯ ತೀವ್ರ ಪ್ರತಿರೋಧವನ್ನು ಹಿಮ್ಮೆಟ್ಟಿಸಿದ ಬಳಿಕ, ಮರಿಯುಪೋಲ್ ನ ಪ್ರಮುಖ ಸೇತುವೆ ಸಹಿತ ಬಹುತೇಕ ಪ್ರದೇಶಗಳು ರಶ್ಯ ಸೇನೆಯ ನಿಯಂತ್ರಣಕ್ಕೆ ಬಂದಿವೆ. ಕೇವಲ ಬೆರಳೆಣಿಕೆಯಷ್ಟು ಉಕ್ರೇನ್ ಯೋಧರು ನಗರದ ಸ್ಟೀಲ್ ಸ್ಥಾವರದೊಳಗೆ ಅಡಗಿದ್ದಾರೆ ಎಂದು ರಶ್ಯ ಹೇಳಿದೆ.

 ಅಝೋವ್ಸ್ತಾಲ್ ಸ್ಟೀಲ್ ಸ್ಥಾವರದೊಳಗೆ ತನ್ನ ಯೋಧರನ್ನು ರವಾನಿಸಲು ರಶ್ಯ ಹಿಂದೇಟು ಹಾಕುತ್ತಿದೆ. ಯಾಕೆಂದರೆ ಇದರಿಂದ ಅವರ ಕಡೆ ಭಾರೀ ಸಾವುನೋವು ಆಗಬಹುದು. ಆದ್ದರಿಂದ ಇನ್ನಷ್ಟು ದಿನ ಸ್ಟೀಲ್ ಸ್ಥಾವರಕ್ಕೆ ದಿಗ್ಬಂಧನ ವಿಧಿಸುವುದು ಅವರ ಯೋಜನೆಯಾಗಿದೆ ಎಂದು ಉಕ್ರೇನ್ ಅಧ್ಯಕ್ಷರ ಸಲಹೆಗಾರ ಒಲೆಕ್ಸಿ ಅರಿಸ್ಟೋವಿಚ್ ಹೇಳಿದ್ದಾರೆ.

ಈ ಮಧ್ಯೆ, ಮುಂದೊತ್ತಿ ಬರುತ್ತಿರುವ ರಶ್ಯ ಸೇನೆಯನ್ನು ತಡೆಯಲು ತನ್ನಲ್ಲಿ ಆಯುಧದ ಕೊರತೆಯಾಗಿದೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹೇಳಿದ್ದಾರೆ. ಮರಿಯುಪೋಲ್ ಅನ್ನು ನಮ್ಮ ಧೀರ ಯೋಧರು ಇನ್ನೂ ಬಿಟ್ಟುಕೊಟ್ಟಿಲ್ಲ. ಆದರೆ ನಮಗಿಲ್ಲಿ ಶಸ್ತ್ರಾಸ್ತ್ರದ ಕೊರತೆಯಾಗಿದೆ. ಪಾಶ್ಚಿಮಾತ್ಯ ದೇಶಗಳು ಇನ್ನಷ್ಟು ಶಸ್ತ್ರಾಸ್ತ್ರ ಒದಗಿಸಿದರೆ ರಶ್ಯನ್ನರನ್ನು ತಡೆಹಿಡಿಯಬಹುದು ಎಂದವರು ಹೇಳಿದ್ದಾರೆ.
  ಕೀವ್ ಸುತ್ತಮುತ್ತಲಿನ ಪ್ರದೇಶದಿಂದ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡು ಪೂರ್ವ ಪ್ರಾಂತದಲ್ಲಿ ನಿಯೋಜಿಸುವ ಮೂಲಕ ಆ ದಿಕ್ಕಿನಿಂದ ಆಕ್ರಮಣ ಎಸಗಲು ರಶ್ಯ ರಣತಂತ್ರ ಹೂಡಿದೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.

 ರಶ್ಯ ಸೇನೆ ಹಿಂದಕ್ಕೆ ಸರಿದ ಪ್ರದೇಶಗಳ ಮೋರಿಯಲ್ಲಿ ಸುಮಾರು 1,020 ನಾಗರಿಕರ ಮೃತದೇಹ ಪತ್ತೆಯಾಗಿದೆ ಎಂದು ಉಪಪ್ರಧಾನಿ ಓಲ್ಗಾ ಸ್ಟೆಫಾನಿಶಿನ ಹೇಳಿರುವುದಾಗಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ. 

ಕೀವ್ ಹೊರವಲಯದ ಬೊರೊಡ್ಯಾಂಕದಲ್ಲಿ 9 ನಾಗರಿಕರ ಮೃತದೇಹ ಪತ್ತೆಯಾಗಿದ್ದು ಇವರನ್ನು ಚಿತ್ರಹಿಂಸೆ ನೀಡಿ ಹತ್ಯೆಗೈದಿರುವ ಸಾಧ್ಯತೆಯಿದೆ. ನಾಗರಿಕರು ಎಂದು ಗೊತ್ತಿದ್ದೂ ಅವರನ್ನು ಹತ್ಯೆಗೈಯಲಾಗಿದೆ. ಸಂತ್ರಸ್ತರಲ್ಲಿ ಒಬ್ಬಳು 15 ವರ್ಷದ ಹುಡುಗಿ ಎಂದು ವಲಯದ ಮುಖ್ಯ ಪೊಲೀಸ್ ಅಧಿಕಾರಿ ಆ್ಯಂಡ್ರಿಯ್ ನಿಬಿಟೋವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News