ನಗರದ ಇತರ ಭಾಗಗಳಲ್ಲೂ ಧ್ವಂಸ ಕಾರ್ಯಾಚರಣೆ ನಡೆಸುವಂತೆ ದಿಲ್ಲಿಯ ಬಿಜೆಪಿ ವರಿಷ್ಠ ಕರೆ

Update: 2022-04-21 17:04 GMT

ಹೊಸದಿಲ್ಲಿ, ಎ. 20: ನಗರದ ಪೂರ್ವ ಹಾಗೂ ದಕ್ಷಿಣ ಭಾಗಗಳಲ್ಲಿರುವ ಮಹಾನಗರ ಪಾಲಿಕೆಗಳು ಬಾಂಗ್ಲಾದೇಶಿಗಳು ಹಾಗೂ ರೋಹಿಂಗ್ಯಾಗಳ ಅತಿಕ್ರಮಣವನ್ನು ತೆರವುಗೊಳಿಸಲು ಧ್ವಂಸ ಕಾರ್ಯಾಚರಣೆ ನಡೆಸಬೇಕು ಎಂದು ಬಿಜೆಪಿಯ ದಿಲ್ಲಿ ಘಟಕದ ವರಿಷ್ಠ ಆದರ್ಶ್ ಗುಪ್ತಾ ಗುರುವಾರ ಹೇಳಿದ್ದಾರೆ.

ಜಹಾಂಗಿರ್ಪುರಿಯ ಮಸೀದಿಯ ಪ್ರವೇಶ ದ್ವಾರ ಹಾಗೂ ಬಹುತೇಕ ಮುಸ್ಲಿಮರಿಗೆ ಸೇರಿದ ಹಲವು ಅಂಗಡಿಗಳು, ಮನೆಗಳು ಹಾಗೂ ಕಟ್ಟಡಗಳನ್ನು ಬಿಜೆಪಿ ಆಡಳಿತದ ಉತ್ತರ ದಿಲ್ಲಿ ಮಹಾನಗರ ಪಾಲಿಕೆ ಧ್ವಂಸಗೊಳಿಸಿದ ದಿನದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ. ಈ ಪ್ರದೇಶದಲ್ಲಿ ಕೋಮು ಹಿಂಸಾಚಾರ ನಡೆದ ಒಂದು ದಿನದ ಬಳಿಕ ಧ್ವಂಸ ಕಾರ್ಯಾಚರಣೆ ನಡೆಸಲಾಗಿತ್ತು. ಸುಪ್ರೀಂ ಕೋರ್ಟ್ ತಡೆ ವಿಧಿಸಿದ ಒಂದು ಗಂಟೆಗಳ ಬಳಿಕವೂ ಧ್ವಂಸ ಕಾರ್ಯಾಚರಣೆ ನಡೆದಿತ್ತು. 

ಜಹಾಂಗಿರ್ಪುರಿಯಲ್ಲಿರುವ ಗಲಭೆಕೋರರ ಕಾನೂನು ಬಾಹಿರ ಕಟ್ಟಡಗಳನ್ನು ಧ್ವಂಸಗೊಳಿಸುವಂತೆ ಗುಪ್ತಾ ಅವರು ಉತ್ತರ ದಿಲ್ಲಿ ಮಹಾನಗರ ಪಾಲಿಕೆಗೆ ಪತ್ರ ಬರೆದ ಬಳಿಕ ಧ್ವಂಸ ಕಾರ್ಯಾಚರಣೆ ನಡೆಸಲಾಗಿತ್ತು. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗುಪ್ತಾ, ಜಹಾಂಗಿರ್ಪುರಿಯಲ್ಲಿ ಧ್ವಂಸ ಕಾರ್ಯಾಚರಣೆ ನಡೆಸಿದ ಬಳಿಕ, ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಹಾಗೂ ಕಮ್ಯೂನಿಸ್ಟರು ಬಾಂಗ್ಲಾದೇಶಿಗಳು ಹಾಗೂ ರೋಹಿಂಗ್ಯಾರನ್ನು ರಕ್ಷಿಸಲು ಮೈತ್ರಿ ಮಾಡಿಕೊಂಡಿವೆ ಎಂದಿದ್ದಾರೆ. ‘‘ಮೊದಲು ರೋಹಿಂಗ್ಯಾ ವಲಸಿಗರು ಹಾಗೂ ಬಾಂಗ್ಲಾದೇಶಿಗಳು ನೆಲೆ ನಿಲ್ಲಲು ಕಾಂಗ್ರೆಸ್ ಅವಕಾಶ ನೀಡಿತು. ಈಗ ಆಪ್ ಅವರಿಗೆ ಉಚಿತ ಪಡಿತರ, ವಿದ್ಯುತ್, ನೀರು ಹಾಗೂ ಹಣವನ್ನು ನೀಡುತ್ತಿದೆ’’ ಎಂದು ಗುಪ್ತಾ ಆರೋಪಿಸಿದ್ದಾರೆ.

ಈ ನಡುವೆ ಗುರುವಾರ ಸುಪ್ರೀಂ ಕೋರ್ಟ್, ಜಹಾಂಗಿರ್ಪುರಿಯಲ್ಲಿ ಧ್ವಂಸ ಕಾರ್ಯಾಚರಣೆಯನ್ನು ಎರಡು ವಾರಗಳ ಕಾಲ   ಸ್ಥಗಿತಗೊಳಿಸುವಂತೆ ಆದೇಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News