ಜಮ್ಮು-ಕಾಶ್ಮೀರ: ಹಿರಿಯ ಲಷ್ಕರ್ ಕಮಾಂಡರ್ ಕಾಂಟ್ರೂ ಸೇರಿ ಇಬ್ಬರು ಭಯೋತ್ಪಾದಕರ ಹತ್ಯೆ
ಶ್ರೀನಗರ,ಎ.21: ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ನಿಷೇಧಿತ ಲಷ್ಕರೆ ತೈಬಾ ಸಂಘಟನೆಯ ಉನ್ನತ ಕಮಾಂಡರ್ ಯೂಸುಫ್ ಕಾಂಟ್ರೂ ಮತ್ತು ಇನ್ನೋರ್ವ ಭಯೋತ್ಪಾದಕ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಡಗುದಾಣದಲ್ಲಿ ಇನ್ನೂ ಮೂವರು ಭಯೋತ್ಪಾದಕರು ಬಚ್ಚಿಟ್ಟುಕೊಂಡಿದ್ದಾರೆನ್ನಲಾಗಿದ್ದು, ಗುಂಡಿನ ಕಾಳಗ ಮುಂದುವರಿದಿದೆ.
ಕಾಂಟ್ರೂ ಭದ್ರತಾ ಪಡೆಗಳ ಹಿಟ್ ಲಿಸ್ಟ್ ನಲ್ಲಿದ್ದ ಎಂದು ತಿಳಿಸಿದ ಐಜಿಪಿ ವಿಜಯಕುಮಾರ್ ಅವರು, ಬಡಗಾಮ್ ಜಿಲ್ಲೆಯಲ್ಲಿ ಇತ್ತೀಚಿಗೆ ಓರ್ವ ವಿಶೇಷ ಪೊಲೀಸ ಅಧಿಕಾರಿ ಮತ್ತು ಸೋದರ, ಓರ್ವ ಯೋಧ ಮತ್ತು ಓರ್ವ ನಾಗರಿಕನ ಹತ್ಯೆ ಸೇರಿದಂತೆ ಹಲವಾರು ನಾಗರಿಕರು ಮತ್ತು ಭದ್ರತಾ ಪಡೆಗಳ ಸಿಬ್ಬಂದಿಗಳ ಹತ್ಯೆಗಳಲ್ಲಿ ಕಾಂಟ್ರೂ ಭಾಗಿಯಾಗಿದ್ದ ಎಂದು ಹೇಳಿದರು.
ಬುಧವಾರ ರಾತ್ರಿ ಬಡಗಾಮ್ ಪೊಲೀಸರಿಂದ ಲಭ್ಯ ಮಾಹಿತಿಯ ಮೇರೆಗೆ ಬಡಗಾಮ್ ಮತ್ತು ಬಾರಾಮುಲ್ಲಾ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಗ್ರಾಮದಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ಆರಂಭಿಸಿದ್ದವು. ರಾತ್ರಿಯಿಡೀ ಆಗಾಗ್ಗೆ ಗುಂಡಿನ ಚಕಮಕಿ ನಡೆಯುತ್ತಲೇ ಇತ್ತು. ಆರಂಭದ ಗುಂಡಿನ ಕಾಳಗದಲ್ಲಿ ಮೂವರು ಯೋಧರು ಮತ್ತು ಓರ್ವ ನಾಗರಿಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಈ ನಡುವೆ ಕೇಂದ್ರ ಸರಕಾರವು ಕಳೆದ 15 ದಿನಗಳಲ್ಲಿ ಕನಿಷ್ಠ ಏಳು ಜನರನ್ನು ಭಯೋತ್ಪಾದಕರೆಂದು ಘೋಷಿಸಿದೆ.