ದಿಲ್ಲಿ ಧ್ವಂಸ ಕಾರ್ಯಾಚರಣೆ ನಡೆದ ಸ್ಥಳಕ್ಕೆ ಭೇಟಿ ನೀಡಲು ಪ್ರಯತ್ನಿಸಿದ ಕಾಂಗ್ರೆಸ್ ನಿಯೋಗಕ್ಕೆ ತಡೆ

Update: 2022-04-21 17:55 GMT

ಹೊಸದಿಲ್ಲಿ, ಎ. 21: ಹಿಂಸಾಚಾರ ಪೀಡಿತ ಜಹಾಂಗಿರ್ಪುರಿಗೆ ಕಾಂಗ್ರೆಸ್ ನಾಯಕರ ನಿಯೋಗ ಗುರುವಾರ ಭೇಟಿ ನೀಡಿದೆ. ಆದರೆ, ಉತ್ತರ ದಿಲ್ಲಿ ಮಹಾನಗರ ಪಾಲಿಕೆ (ಎನ್ಡಿಎಂಸಿ) ಅತಿಕ್ರಮಣ ವಿರೋಧಿ ಕಾರ್ಯಾಚರಣೆ ನಡೆಸಿದ ಪ್ರದೇಶಕ್ಕೆ ತೆರಳಿದ ನಿಯೋಗವನ್ನು ಪೊಲೀಸರು ತಡೆದಿದ್ದಾರೆ. 

ಕಾಂಗ್ರೆಸ್ ನಿಯೋಗದಲ್ಲಿ ಕೇಂದ್ರದ ಮಾಜಿ ಸಚಿವ ಅಜಯ್ ಮಾಕನ್ ಹಾಗೂ ಎಐಸಿಸಿಯ ರಾಜ್ಯ ಘಟಕದ ಉಸ್ತುವಾರಿ ಶಕ್ತಿ ಸಿನ್ಹ ಗೋಹಿಲ್ ಕೂಡ ಇದ್ದರು. ಅತಿಕ್ರಮಣಗಳನ್ನು ತೆರವುಗೊಳಿಸಲು ಉತ್ತರ ದಿಲ್ಲಿ ಮಹಾನಗರ ಪಾಲಿಕೆ (ಎನ್ಡಿಎಂಸಿ) ನಡೆಸಿದ ಧ್ವಂಸ ಕಾರ್ಯಾಚರಣೆಯನ್ನು ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿತ್ತು. ಈ ಕಾರ್ಯಾಚರಣೆ ಬಡವರ ಹಾಗೂ ಅವರ ಜೀವನೋಪಾಯದ ಮೇಲಿನ ದಾಳಿ ಎಂದು ಮಕೇನ್ ಸುದ್ದಿಗಾರರಿಗೆ ತಿಳಿಸಿದ್ದಾರೆ. 

ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಿಸಿದ ಅವರು, ನಿಯಮಗಳನ್ನು ಉಲ್ಲಂಘಿಸಿ ಧ್ವಂಸ ಕಾರ್ಯಾಚರಣೆ ನಡೆಸಲಾಗಿದೆ ಎಂದರು. ‘‘ಧ್ವಂಸ ಕಾರ್ಯಾಚರಣೆ ಕಾನೂನು ಬಾಹಿರ. ನಾನು ಕೂಡ ನಗರಾಭಿವೃದ್ಧಿ ಸಚಿವನಾಗಿದ್ದೆ. ಕಾನೂನು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬ ಬಗ್ಗೆ ನನಗೆ ತಿಳಿದಿದೆ. ಪೂರ್ವಭಾವಿ ನೋಟಿಸ್ ನೀಡದೆ ಅವರು ಹೀಗೆ ಮಾಡುವಂತಿಲ್ಲ” ಎಂದು ಮಕೇನ್ ಹೇಳಿದ್ದಾರೆ.

ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಗೋಹಿಲ್, ಅತಿಕ್ರಮಣ ವಿರೋಧಿ ಕಾರ್ಯಾಚರಣೆ ದೇಶದಲ್ಲಿ ಬೆಲೆ ಏರಿಕೆಯಾಗುತ್ತಿರುವುದರಿಂದ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯುವ ತಂತ್ರ ಎಂದಿದ್ದಾರೆ. ಈ ಪ್ರದೇಶಕ್ಕೆ ದಿಲ್ಲಿ ಮುಖ್ಯಮಂತ್ರಿ ಯಾಕೆ ಭೇಟಿ ನೀಡಿಲ್ಲ ಎಂದು ದಿಲ್ಲಿ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಕುಮಾರ್ ಪ್ರಶ್ನಿಸಿದ್ದಾರೆ. 
‘‘ಇಲ್ಲಿ 144 ಸೆಕ್ಷನ್ ಜಾರಿಗೊಳಿಸಿರುವಾಗ ಬುಲ್ಡೋಜರ್ ಗೆ ಪ್ರವೇಶ ನೀಡಿದ್ದು ಹೇಗೆ? ಪಕ್ಷಪಾತವಾಗಿ ಕ್ರಮ ಕೈಗೊಳ್ಳಲಾಗಿದೆ. ಅವರು ಮುಸ್ಲಿಮರನ್ನು ಮಾತ್ರ ಗುರಿಯಾಗಿರಿಸಿದ್ದಾರೆ. ಅವರಿಗೆ ನ್ಯಾಯ ಒದಗಿಸುವ ಖಾತರಿ ನೀಡಲು ನಾವು ಇಲ್ಲಿಗೆ ಬಂದಿದ್ದೇವೆ” ಎಂದು ಅವರು ಹೇಳಿದ್ದಾರೆ. ದಿಲ್ಲಿ ಕಾಂಗ್ರೆಸ್ ನ ಹಲವು ಹಿರಿಯ ನಾಯಕರು ಕೂಡ ನಿಯೋಗದ ಭಾಗವಾಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News