×
Ad

ಐಪಿಎಲ್: ಮುಂಬೈ ತಂಡವನ್ನು ಕೊನೆಯ ಓವರ್‌ನಲ್ಲಿ ಮಣಿಸಿದ ಚೆನ್ನೈ

Update: 2022-04-21 23:37 IST

ಹೊಸದಿಲ್ಲಿ, ಎ. 21: ಮಾಜಿ ನಾಯಕ ಎಂ.ಎಸ್. ಧೋನಿಯವರ ಜವಾಬ್ದಾರಿಯುತ ಬ್ಯಾಟಿಂಗ್ (ಔಟಾಗದೆ 28, 13 ಎಸೆತ, 3 ಬೌಂಡರಿ, 1 ಸಿಕ್ಸರ್) ನೆರವಿನಿಂದ ಗುರುವಾರ ನಡೆದ ಐಪಿಎಲ್‌ನ 33ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು ಕೊನೆಯ ಓವರ್‌ನಲ್ಲಿ 3 ವಿಕೆಟ್‌ಗಳ ಅಂತರದಿಂದ ಮಣಿಸಿತು.

ಗೆಲ್ಲಲು 156 ರನ್ ಗುರಿ ಬೆನ್ನಟ್ಟಿದ ಚೆನ್ನೈ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಗೆಲುವಿನ ದಡ ಸೇರಿತು. ಚೆನ್ನೈಗೆ ಕೊನೆಯ ಓವರ್‌ನಲ್ಲಿ ಗೆಲುವಿಗೆ 17 ರನ್ ಅಗತ್ಯವಿತ್ತು. 20ನೇ ಓವರ್‌ನ ಮೊದಲ ಎಸೆತದಲ್ಲಿ ಪ್ರಿಟೋರಿಯಸ್(22)ಔಟಾದರು. ಆಗ ತಂಡಕ್ಕೆ ಆಸರೆಯಾದ ಧೋನಿ 1 ಸಿಕ್ಸರ್ ಹಾಗೂ 2 ಬೌಂಡರಿ ಸಿಡಿಸಿ ಚೆನ್ನೈಗೆ ರೋಚಕ ಗೆಲುವು ತಂದರು.

ಚೆನ್ನೈ ಟೂರ್ನಿಯಲ್ಲಿ ಆಡಿರುವ 7ನೇ ಪಂದ್ಯದಲ್ಲಿ 2ನೇ ಗೆಲುವು ದಾಖಲಿಸಿದರೆ, ಮುಂಬೈ ಸತತ 7ನೇ ಸೋಲು ಅನುಭವಿಸಿತು. ಚೆನ್ನೈ ಪರ ಅಂಬಟಿ ರಾಯುಡು(40 ರನ್, 35 ಎಸೆತ), ರಾಬಿನ್ ಉತ್ತಪ್ಪ(30 ರನ್, 25 ಎಸೆತ)ಹಾಗೂ ಡ್ವೇಯ್ನೆ ಪ್ರಿಟೋರಿಯಸ್(22)ಒಂದಷ್ಟು ಹೋರಾಟ ನೀಡಿದರು. ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಸೊನ್ನೆ ಸುತ್ತಿದರು.

ಮುಂಬೈ ಪರ ಡೇನಿಯಲ್ ಸ್ಯಾಮ್ಸ್ (4-30)ಯಶಸ್ವಿ ಪ್ರದರ್ಶನ ನೀಡಿದರೆ, ಜಯದೇವ್ ಉನದ್ಕಟ್(2-38)ಸ್ಯಾಮ್ಸ್‌ಗೆ ಸಾಥ್ ನೀಡಿದರು.
 
 ಇದಕ್ಕೂ ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಮುಂಬೈ ಆರಂಭಿಕ ಆಟಗಾರರಿಬ್ಬರನ್ನು ಶೂನ್ಯಕ್ಕೆ ಕಳೆದುಕೊಂಡಿದ್ದರೂ ಮಧ್ಯಮ ಕ್ರಮಾಂಕದ ಬ್ಯಾಟರ್ ತಿಲಕ್ ವರ್ಮಾ ಅವರ ಅಜೇಯ ಅರ್ಧಶತಕದ(51 ರನ್, 43 ಎಸೆತ, 3 ಬೌಂಡರಿ, 2 ಸಿಕ್ಸರ್)ಸಹಾಯದಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 155 ರನ್ ಗಳಿಸಿತು.

ಚೆನ್ನೈ ಪರ ಮುಕೇಶ್ ಚೌಧರಿ(3-19) ಹಾಗೂ ಡ್ವೆಯ್ನೆ ಬ್ರಾವೊ(2-36) ಐದು ವಿಕೆಟ್‌ಗಳನ್ನು ಹಂಚಿಕೊಂಡರು.

 ಮೊದಲ ಓವರ್‌ನಲ್ಲಿಯೇ ನಾಯಕ ರೋಹಿತ್ ಶರ್ಮಾ(0)ಹಾಗೂ ಇಶಾನ್ ಕಿಶನ್(0)ವಿಕೆಟನ್ನು ಕಳೆದುಕೊಂಡ ಮುಂಬೈ ಅತ್ಯಂತ ಕಳಪೆ ಆರಂಭ ಪಡೆಯಿತು. ಮುಕೇಶ್ ಚೌಧರಿ ಈ ಇಬ್ಬರು ಆಟಗಾರರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಡೆವಾಲ್ಡ್ ಬ್ರೆವಿಸ್(4) ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲದೆ ಮುಕೇಶ್‌ಗೆ ಮೂರನೇ ಬಲಿಯಾದರು. ಮುಂಬೈ 23 ರನ್‌ಗೆ 3 ವಿಕೆಟ್ ಕಳೆದುಕೊಂಡಾಗ ಜೊತೆಯಾದ ಸೂರ್ಯಕುಮಾರ್ ಯಾದವ್(32 ರನ್, 21 ಎಸೆತ, 3 ಬೌಂಡರಿ, 1 ಸಿಕ್ಸರ್)ಹಾಗೂ ತಿಲಕ್ ವರ್ಮಾ(ಔಟಾಗದೆ 51, 43 ಎಸೆತ, 3 ಬೌಂಡರಿ, 2 ಸಿಕ್ಸರ್)4ನೇ ವಿಕೆಟ್‌ಗೆ 24 ರನ್ ಸೇರಿಸಿದರು.

ಯಾದವ್ ಔಟಾದ ಬಳಿಕ ಹೃತಿಕ್ ಶೋಕಿನ್(25 ರನ್, 25 ಎಸೆತ)ಅವರೊಂದಿಗೆ 5ನೇ ವಿಕೆಟ್‌ಗೆ 38 ರನ್ ಸೇರಿಸಿದ ವರ್ಮಾ ತಂಡವನ್ನು ಆಧರಿಸಿದರು. ಕಿರೋನ್ ಪೊಲಾರ್ಡ್(14 ರನ್) ಹಾಗೂ ಡೆನಿಯಲ್ ಸ್ಯಾಮ್ಸ್(5 ರನ್) ಅಲ್ಪ ಮೊತ್ತಕ್ಕೆ ಔಟಾದರೂ ದೃತಿಗೆಡದ ವರ್ಮಾ ಅವರು ಉನದ್ಕಟ್(ಔಟಾಗದೆ 19)ಅವರೊಂದಿಗೆ 8ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 35 ರನ್ ಸೇರಿಸಿ ತಂಡದ ಮೊತ್ತವನ್ನು 155ಕ್ಕೆ ತಲುಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News