'ಗೋಡ್ಸೆಯನ್ನು ವೈಭವೀಕರಿಸಿ, ವಿದೇಶಿಯರನ್ನು ಗಾಂಧಿ ಆಶ್ರಮಕ್ಕೆ ಕರೆದೊಯುತ್ತಿರುವ ಬಿಜೆಪಿ’: ಶಿವಸೇನೆ ವಾಗ್ದಾಳಿ
ಮುಂಬೈ (ಮಹಾರಾಷ್ಟ್ರ): ಶಿವಸೇನೆ ತನ್ನ ಮುಖವಾಣಿ “ಸಾಮ್ನಾ’’ದಲ್ಲಿ ಭಾರತೀಯ ಜನತಾ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದು, "ಪಕ್ಷವು ನಾಥುರಾಮ್ ಗೋಡ್ಸೆಯನ್ನು ವೈಭವೀಕರಿಸುತ್ತದೆ. ಆದರೆ ಭಾರತ ಪ್ರವಾಸದಲ್ಲಿರುವ ವಿದೇಶಿ ಗಣ್ಯರನ್ನು ಸಬರಮತಿ ಆಶ್ರಮಕ್ಕೆ ಕರೆದೊಯ್ಯಲಾಗುತ್ತದೆ" ಎಂದು ಟೀಕಿಸಿದೆ. ಮಹಾತ್ಮ ಗಾಂಧಿ ಅವರು ಜಾಗತಿಕ ವೇದಿಕೆಯಲ್ಲಿ ಭಾರತದ ಗುರುತಾಗಿ ಉಳಿದಿದ್ದಾರೆ ಎಂದು ಪ್ರತಿಪಾದಿಸಿದೆ.
"ಅವರು (ಬಿಜೆಪಿ) ನಾಥುರಾಮ್ ಗೋಡ್ಸೆಯ ಸಿದ್ಧಾಂತವನ್ನು ಬೆಂಬಲಿಸುತ್ತಾರೆ ಎಂಬುದು ಆಶ್ಚರ್ಯಕರವಾಗಿದೆ . ಆದರೆ ವಿದೇಶಿ ಅತಿಥಿಗಳು ಭಾರತಕ್ಕೆ ಬಂದಾಗ ಚರಕದಲ್ಲಿ ನೂಲು ನೇಯಲು ಅವರನ್ನು ಗಾಂಧಿಯವರ ಸಬರಮತಿ ಆಶ್ರಮಕ್ಕೆ ಕರೆದೊಯ್ಯುಲಾಗುತ್ತದೆ"ಎಂದು ‘’ಸಾಮ್ನಾ’’ ಸಂಪಾದಕೀಯದಲ್ಲಿ ಬರೆಯಲಾಗಿದೆ.
ಗುಜರಾತಿನಲ್ಲಿ ಏಕತೆಯ ಪ್ರತಿಮೆ ಇದ್ದರೂ ವಿದೇಶಿ ಗಣ್ಯರನ್ನು ಸಬರಮತಿ ಆಶ್ರಮಕ್ಕೆ ಕರೆದೊಯ್ಯಲಾಗುತ್ತಿದೆ ಎಂದು ಸಂಪಾದಕೀಯವು ಕೇಂದ್ರದ ಬಿಜೆಪಿ ನೇತೃತ್ವದ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
"ಗುಜರಾತ್‌ನಲ್ಲಿ ‘ಉಕ್ಕಿನ ಮನುಷ್ಯ ‘ಸರ್ದಾರ್ ಪಟೇಲ್ ಅವರ ಭವ್ಯವಾದ ಪ್ರತಿಮೆಯನ್ನು ನಿರ್ಮಿಸಲಾಗಿದ್ದರೂ’ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹಾಗೂ ಇತರ (ವಿದೇಶಿ) ಅತಿಥಿಗಳನ್ನು ಅಲ್ಲಿಗೆ ಕರೆದೊಯ್ಯಲಾಗಿಲ್ಲ. ಏಕೆಂದರೆ ಜಾಗತಿಕ ವೇದಿಕೆಯಲ್ಲಿ ಗಾಂಧಿ ಭಾರತದ ಗುರುತಾಗಿ ಉಳಿದಿದ್ದಾರೆ" ಎಂದು ಸಾಮ್ನಾ ಸಂಪಾದಕೀಯ ಬರೆಯಲಾಗಿದೆ.