×
Ad

ಮಹಾರಾಷ್ಟ್ರ ಸಿಎಂ ಮನೆ ಮುಂದೆ ಹನುಮಾನ್ ಚಾಲೀಸಾ ಪಠಿಸುವುದಾಗಿ ರಾಣಾ ದಂಪತಿ ಘೋಷಣೆ: ಶಿವಸೇನೆ ಕಾರ್ಯಕರ್ತರ ಪ್ರತಿಭಟನೆ

Update: 2022-04-23 13:58 IST

ಮುಂಬೈ: ಅಮರಾವತಿ ಸಂಸದೆ ನವನೀತ್ ರಾಣಾ ಹಾಗೂ  ಅವರ ಪತಿ ಶಾಸಕ ರವಿ ರಾಣಾ ಅವರು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ  ನಿವಾಸ 'ಮಾತೋಶ್ರೀ' ಹೊರಗೆ ಹನುಮಾನ್ ಚಾಲೀಸಾ ಪಠಿಸುವುದಾಗಿ ಘೋಷಿಸಿದ ನಂತರ ಶನಿವಾರ  ಬೆಳಿಗ್ಗೆ ಮುಂಬೈನಲ್ಲಿರುವ ರಾಣಾ ದಂಪತಿಯ  ಅಪಾರ್ಟ್‌ಮೆಂಟ್‌ನ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ಶಿವಸೇನಾ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು.

ಶಿವಸೇನೆ ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ಭೇದಿಸಿ ಉಪನಗರ ಖಾರ್‌ನಲ್ಲಿರುವ ರಾಣಾ  ದಂಪತಿಗಳ ನಿವಾಸದ ಆವರಣಕ್ಕೆ ಪ್ರವೇಶಿಸಲು ಪ್ರಯತ್ನಿಸಿದರು.  ಆದರೆ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದರು ಹಾಗೂ  ಶಿವಸೇನೆ ಕಾರ್ಯಕರ್ತರನ್ನು ಮುಂದೆ ಹೋಗದಂತೆ ತಡೆದರು.

ನವನೀತ್ ರಾಣಾ ಹಾಗೂ  ರವಿ ರಾಣಾ ಇಬ್ಬರೂ ಮಹಾರಾಷ್ಟ್ರದ ವಿದರ್ಭ ಪ್ರದೇಶದ ಪಕ್ಷೇತರ ಶಾಸಕರು.

ಪೊಲೀಸರು 'ಮಾತೋಶ್ರೀ' ಹೊರಗೆ ಭದ್ರತೆಯನ್ನು ಹೆಚ್ಚಿಸಿದ್ದಾರೆ ಹಾಗೂ  ಜನಸಂದಣಿಯನ್ನು ನಿಯಂತ್ರಿಸಲು ಠಾಕ್ರೆ ನಿವಾಸಕ್ಕೆ ಹೋಗುವ ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ್ದಾರೆ. ಶಿವಸೇನಾ ಕಾರ್ಯಕರ್ತರು ರಾಣಾ  ದಂಪತಿಯನ್ನು ಧೈರ್ಯವಿರದ್ದರೆ ತಮ್ಮ ನಿವಾಸದಿಂದ ಹೊರಗೆ ಬನ್ನಿಗೆ ಎಂದು ಸವಾಲೆಸೆದ ಬಳಿಕ  ಅಪಾರ್ಟ್ಮೆಂಟ್ ಹೊರಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಯಿತು.

ಶುಕ್ರವಾರ, ಮುಂಬೈ ಪೊಲೀಸರು ದಂಪತಿಗೆ ನೋಟಿಸ್ ನೀಡಿದ್ದು, ನಗರದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಮಾಡದಂತೆ ಕೇಳಿಕೊಂಡಿದ್ದಾರೆ. ‘ಮಾತೋಶ್ರೀ’ ಅಲ್ಲದೆ, ದಕ್ಷಿಣ ಮುಂಬೈನಲ್ಲಿರುವ ಉದ್ಧವ್ ಠಾಕ್ರೆ ಅವರ ಅಧಿಕೃತ ನಿವಾಸ ‘ವರ್ಷ’ದಲ್ಲಿಯೂ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ.

"ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಶಿವಸೇನೆಯ ಕಾರ್ಯಕರ್ತರಿಗೆ ನಮ್ಮ ವಿರುದ್ಧ ಕೆಣಕುವಂತೆ ಆದೇಶಿಸಿದರು. ಅವರು ಬ್ಯಾರಿಕೇಡ್‌ಗಳನ್ನು ಪುಡಿಗಟ್ಟುತ್ತಿದ್ದಾರೆ. ನಾನು ಹೊರಗೆ ಹೋಗುತ್ತೇನೆ ಹಾಗೂ  'ಮಾತ್ರೋಶ್ರೀ'ಯಲ್ಲಿ ಹನುಮಾನ್ ಚಾಲೀಸಾ ಪಠಿಸುತ್ತೇನೆ ಎಂದು ಪುನರುಚ್ಚರಿಸುತ್ತಿದ್ದೇನೆ" ಎಂದು ನವನೀತ್ ರಾಣಾ ಹೇಳಿದ್ದಾರೆ.

ಶಿವಸೇನೆ ಸಂಸ್ಥಾಪಕ ಬಾಳ್ ಠಾಕ್ರೆ ಅವರು ಆಚರಿಸುತ್ತಿದ್ದ ಸಿದ್ಧಾಂತದಿಂದ ಮಹಾರಾಷ್ಟ್ರ ಮುಖ್ಯಮಂತ್ರಿ ವಿಮುಖರಾಗಿದ್ದಾರೆ ಎಂದು ರವಿ ರಾಣಾ ಅವರು ಉದ್ಧವ್ ಠಾಕ್ರೆ ಅವರನ್ನು ಸಿದ್ಧಾಂತದ ವಿಚಾರದಲ್ಲಿ ತರಾಟೆಗೆ ತೆಗೆದುಕೊಂಡರು.

"ಬಾಳಾಸಾಹೇಬ್ ಠಾಕ್ರೆ ರಚಿಸಿದ ಶಿವಸೇನೆ ಈಗಿಲ್ಲ. ಆ ಶಿವಸೇನೆಯು ನಮಗೆ ಹನುಮಾನ್ ಚಾಲೀಸಾವನ್ನು ಪಠಿಸಲು ಅವಕಾಶ ನೀಡುತ್ತಿತ್ತು" ಎಂದು ರಾಣಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News