ಬಲಪಂಥೀಯರಿಂದ ಟ್ರೋಲ್: ಇಫ್ತಾರ್ ಟ್ವೀಟ್ ಡಿಲೀಟ್ ಮಾಡಿದ ಸೇನೆ

Update: 2022-04-23 12:38 GMT
Photo: Twitter/@prodefencejammu

ಹೊಸದಿಲ್ಲಿ: ಭಾರತೀಯ ಸೇನೆಯು ಇತ್ತೀಚೆಗೆ ಜಮ್ಮು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಆಯೋಜಿಸಿದ್ದ ಇಫ್ತಾರ್ ಕೂಟದ ಚಿತ್ರವೊಂದನ್ನು ಬುಧವಾರ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರೂ ನಂತರ ಬಲಪಂಥೀಯರಿಂದ ಟ್ರೋಲ್ ನಿಂದ ಅದನ್ನು ಡಿಲೀಟ್ ಮಾಡಿದ ಘಟನೆ ನಡೆದಿದೆ.

ಪಿಆರ್‌ಒ ಡಿಫೆನ್ಸ್ ಜಮ್ಮು ಎಂಬ ಟ್ವಿಟರ್ ಹ್ಯಾಂಡಲ್ ಇಫ್ತಾರ್ ಕೂಟವೊಂದರ ಚಿತ್ರವನ್ನು ಪ್ರಕಟಿಸಿ "ಜಾತ್ಯತೀತ ಸಂಪ್ರದಾಯವನ್ನು ಜೀವಂತವಾಗಿರಿಸಿ, ಭಾರತೀಯ ಸೇನೆಯು ದೋಡಾ ಜಿಲ್ಲೆಯ ಅರ್ನೋರ ಎಂಬಲ್ಲಿ ಇಫ್ತಾರ್ ಕೂಟ ಆಯೋಜಿಸಿತ್ತು.#ರಮಾದಾನ್'' ಎಂದು ಬರೆದಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ್ದ ಸುದರ್ಶನ್ ಟಿವಿ ಮುಖ್ಯ ಸಂಪಾದಕ ಸುರೇಶ್ ಚವ್ಹಂಕೆ "ಈಗ ಈ ರೋಗ ಭಾರತೀಯ ಸೇನೆಯನ್ನೂ ಪ್ರವೇಶಿಸಿದೆಯೇ?,'' ಎಂದು ವಿವಾದಾತ್ಮಕ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಸಾಮಾಜಿಕ ಜಾಲತಾಣಿಗರಿಂದ ಟೀಕೆಗೆ ಗುರಿಯಾದರೆ ಕೆಲವರು ಅವರನ್ನು ಶ್ಲಾಘಿಸಿದ್ದಾರೆ.

ಒಬ್ಬ ಟ್ವಿಟರಿಗರು ಚವ್ಹಂಕೆ ಅವರನ್ನು ಬೆಂಬಲಿಸಿ "ನಾನು ನನ್ನ ಭಾರತೀಯ ಸೇನೆಯನ್ನು ಬಹಳ ಗೌರವಿಸುತ್ತೇನೆ, ಆದರೆ ಈ ರೀತಿಯ ವಿಚಾರ ರಾಜಕಾರಣಿಗಳಿಗೆ ಹೆಚ್ಚು ಸೂಕ್ತ,''ಎಂದು ಬರೆದಿದ್ದರೆ ಇನ್ನೊಬ್ಬರು ಟೀಕಿಸಿ "ಮಿಸ್ಟರ್ ಸುರೇಶ್ ಸೇನಾ ಪಡೆಗಳ ಕಾರ್ಯನಿರ್ವಹಣೆ, ಸಂಪ್ರದಾಯಗಳ ಕುರಿತು ಮಾತನಾಡುವುದರಿಂದ ದೂರವಿರಿ, ನಿಮ್ಮ ಸಲಹೆ ಸೂಚನೆಗಳು ನಮಗೆ ಬೇಕಿಲ್ಲ,'' ಎಂದು ಬರೆದಿದ್ದಾರೆ.

ಆರ್‌ಜೆಡಿಯ ಸಾಮಾಜಿಕ ಜಾಲತಾಣ ಸಂಚಾಲಕ ಆಕಾಶ್ ಎಂಬವರು ಟ್ವೀಟ್ ಮಾಡಿ "ನಿಮಗೆ ಅಷ್ಟೂ ಸಮಸ್ಯೆ (ಭಾರತೀಯ ಸೇನೆ ಕುರಿತಂತೆ) ಇದ್ದರೆ ಹೋಗಿ ಪಾಕಿಸ್ತಾನದಲ್ಲಿ ನೆಲೆಸಿ,''ಎಂದು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News