ಪಿಣರಾಯಿ ವಿಜಯನ್ ನಿವಾಸದ ಸಮೀಪವೇ ಅವಿತಿದ್ದ ಆರೆಸ್ಸೆಸ್ ಕಾರ್ಯಕರ್ತನ ಬಂಧನ

Update: 2022-04-23 16:57 GMT

ಕಣ್ಣೂರು,ಎ.24: ಆಡಳಿತಾರೂಢ ಸಿಪಿಎಂ ಪಕ್ಷದ ಕಾರ್ಯಕರ್ತನೊಬ್ಬನ ಹತ್ಯೆ ಪ್ರಕರಣದ ಆರೋಪಿಯಾಗಿರುವ ಆರೆಸ್ಸೆಸ್ ಕಾರ್ಯಕರ್ತನೊಬ್ಬ ಕಣ್ಣೂರು ಜಿಲ್ಲೆಯಲ್ಲಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನಿವಾಸದ ಸಮೀಪದಲ್ಲಿರುವ ಅನಿವಾಸಿ ಭಾರತೀಯರೊಬ್ಬರ ಬೀಗಹಾಕಿದ ಮನೆಯೊಳಗೆ ಅವಿತುಕೊಂಡಿದ್ದುದು ಪತ್ತೆಯಾಗಿದ್ದು, ಪೊಲೀಸರು ಶುಕ್ರವಾರ ಆತನನ್ನು ಬಂಧಿಸಿದ್ದಾರೆ.ಸಿಪಿಎಂ ಕಾರ್ಯಕರ್ತ ಪುನ್ನೊಳ್ ಹರಿದಾಸನ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನಿಜಿಲ್‌ದಾಸ್ (38) ಬಂಧಿತ ಆರೆಸ್ಸೆಸ್ ಕಾರ್ಯಕರ್ತನಾಗಿದ್ದಾನೆ. ಪಿಣರಾಯಿ ಪಟ್ಟಣದಲ್ಲಿರುವ ಪಂಡ್ಯಾಲಮುಳುಕ್ಕು ಗ್ರಾಮದ ಪ್ರಶಾಂತ್ ಎಂಬಾತನಿಗೆ ಸೇರಿದ ಮನೆಯಲ್ಲಿ ಅವಿತಿದ್ದನೆಂದು ತಿಳಿದುಬಂದಿದೆ.

ಪ್ರಶಾಂತ್ ಕೆಲವು ಸಮಯದಿಂದ ಗಲ್ಫ್ ರಾಷ್ಟ್ರವೊಂದರಲ್ಲಿ ಉದ್ಯೋಗದಲ್ಲಿದ್ದಾರೆ. ನಿಜಿಲ್‌ದಾಸ್ ಸಿಪಿಎಂನ ಮಾಜಿ ಬೆಂಬಲಿಗನಾಗಿದ್ದನೆನ್ನಲಾಗಿದೆ. ಕೊಲೆ ಆರೋಪಿಯನ್ನು ತನ್ನ ನಿವಾಸದಲ್ಲಿ ವಾಸಿಸಲು ಅವಕಾಶ ನೀಡಿದ ಆರೋಪದಲ್ಲಿ ಹಿರಿಯ ಮಾಧ್ಯಮಿಕ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ಪ್ರಶಾಂತ್‌ನ ಪತ್ನಿ ರೇಷ್ಮಾ ಹಾಗೂ ನಿಜಿಲ್‌ದಾಸ್‌ನ ಓರ್ವ ಸ್ನೇಹಿತನನ್ನು ಕೂಡಾ ಪೊಲೀಸರು ಬಂಧಿಸಿದ್ದಾರೆ.

 ತನ್ನ ಪತ್ನಿ ವಿದೇಶಕ್ಕೆ ತೆರಳಿದ ಬಳಿಕ ರೇಷ್ಮಾ ಅಂದಲೂರ್ ಕಾವ್‌ನ ಸಮೀಪವಿರುವ ಇನ್ನೊಂದು ಮನೆಯಲ್ಲಿ ವಾಸಿಸುತ್ತಿದ್ದು, ಪಿಣರಾಯಿನಲ್ಲಿರುವ ಅವರ ಮನೆಗೆ ಬೀಗ ಹಾಕಲಾಗಿತ್ತು. ಫೆಬ್ರವರಿಯಲ್ಲಿ ಹರಿದಾಸ್‌ನನ್ನು ಆರೆಸ್ಸೆಸ್ ಕಾಯಕರ್ತರು ಕಡಿದು ಹತ್ಯೆಗೈದ ಘಟನೆಯ ಬಳಿಕ ನಿಜಿಲ್‌ದಾಸ್ ತಲೆಮರೆಸಿಕೊಂಡಿದ್ದನು. ಆನಂತರ ಆತ ಪೊಲೀಸರ ಕಣ್ತಪ್ಪಿಸಿ ಹಲವಾರು ಸ್ಥಳಗಳಲ್ಲಿ ವಾಸವಾಗಿದ್ದ.ತನಗೆ ಅವಿತುಕೊಳ್ಳಲು ಸ್ಥಳವೊಂದನ್ನು ಏರ್ಪಾಡು ಮಾಡುವಂತೆಯೂ ರೇಷ್ಮಾಳನ್ನು ಆತ ವಿನಂತಿಸಿದ್ದ. ಆರೋಪಿಯು ಎಪ್ರಿಲ್ 17ರಿಂದೀಚೆಗೆ ಪಿಣರಾಯಿನಲ್ಲಿಯೇ ತಲೆಮರೆಸಿಕೊಂಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ನಿಜಿಲ್‌ದಾಸ್‌ನ ಬಂಧನದ ಸುದ್ದಿ ಹರಡುತ್ತಿದ್ದಂತೆಯೇ, ಆತ ಅವಿತಿದ್ದ ಮನೆಯ ಮೇಲೆ ನಾಡಬಾಂಬ್‌ಗಳನ್ನು ಎಸೆಯಲಾಗಿದೆಯೆಂದು ತಿಳಿದುಬಂದಿದೆ. ಕೆಲವು ಅಜ್ಞಾತ ವ್ಯಕ್ತಿಗಳು ಮನೆಯ ಕಿಟಕಿಗಾಜುಗಳನ್ನು ಒಡೆದುಹಾಕಿರುವುದಾಗಿ ವರದಿಯಾಗಿದೆ.

  ನಿಜಿಲ್‌ದಾಸ್ ಅವಿತುಕೊಂಡಿದ್ದ ಮನೆಯ ಮಾಲಕ ಪ್ರಶಾಂತ್ ಹಾಗೂ ಆತನ ಕುಟುಂಬಿಕರು ಸಿಪಿಎಂ ಬೆಂಬಲಿಗರೆಂದು ಆಡಳಿತಾರೂಢ ಸಿಪಿಎನ ಸ್ಥಳೀಯ ಕಾರ್ಯದರ್ಶಿ ಕಕ್ಕೊತ್ ರಾಜನ್ ತಿಳಿಸಿದ್ದಾರೆ. ಆದರೆ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ವಿ.ಜಯರಾಜನ್ ಅವರು, ಸಿಪಿಎಂ ಬೆಂಬಲಿಗ ಕುಟುಂಬವೊಂದು ಕೊಲೆ ಆರೋಪಿಗೆ ಆಶ್ರಯ ನೀಡಿದೆಯೆಂದು ಹೇಳುವುದು ವಾಸ್ತವಿಕವಾಗಿ ತಪ್ಪಾದೀತು ಎಂದು ಹೇಳಿದ್ದಾರೆ. ಪ್ರಶಾಂತ್ ಹಾಗೂ ಆತನ ಪತ್ನಿಗೆ ಆರೆಸ್ಸೆಸ್ ಜೊತೆಗೆ ನಿಕಟವಾದ ನಂಟಿತ್ತು ಎಂದವರು ಹೇಳಿದ್ದಾರೆ. ವಿದೇಶಕ್ಕೆ ತೆರಳುವ ಮುನ್ನ ಪ್ರಶಾಂತ್ ಹಲವು ವಿಚಾರಗಲ್ಲಿ ಸಂಘಪರಿವಾರವನ್ನು ಬೆಂಬಲಿಸಿದ್ದನೆಂದು ಎಂ.ವಿ.ಜಯರಾಜ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News