ಯಸ್ ಬ್ಯಾಂಕ್ ಸಹಸಂಸ್ಥಾಪಕ , ಡಿಎಚ್‌ಎಫ್‌ಎಲ್ ಪ್ರವರ್ತಕರಿಂದ 5050 ಕೋಟಿ ರೂ. ಅಕ್ರಮ ವರ್ಗಾವಣೆ
ಹೊಸದಿಲ್ಲಿ,ಎ.23: ಯಸ್ ಬ್ಯಾಂಕ್ ಸಹಸಂಸ್ಥಾಪಕ ರಾಣಾ ಕಪೂರ್ ಹಾಗೂ ದೇವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ನ ಪ್ರವರ್ತಕರಾದ ಕಪಿಲ್ ವಾಧ್ವಾನ್ ಹಾಗೂ ಧೀರಜ್ ವಾಧ್ವಾನ್ ಅವರು ‘ಸಂದೇಹಾಸ್ಪದ ವಹಿವಾಟು’ಗಳ ಮೂಲಕ 5050 ಕೋಟಿ ರೂ. ಮೌಲ್ಯದ ಕಪ್ಪುಹಣವನ್ನು ಬಿಳುಪುಗೊಳಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.
‘‘ ಈ ಅಪರಾಧ ಪ್ರಕರಣದಲ್ಲಿ ಸೃಷ್ಟಿಯಾದ ದೊಡ್ಡ ಮೊತ್ತದ ವರಮಾನವನ್ನು ಕಪೂರ್ ಅವರು ಸಾಗರೋತ್ತರ ದೇಶಗಳಿಗೆ ವರ್ಗಾಯಿಸಲಾಗಿದೆ. ಹೀಗಾಗಿ ಈ ಮೊತ್ತವನ್ನು ಕಪ್ಪುಹಣ ಬಿಳಿಪುಗೊಳಿಸುವಿಕೆ ತಡೆ ಕಾಯ್ದೆಯ ನಿಯಮಗಳ ಅಡಿಯಲ್ಲಿ ಮುಟ್ಟುಗೋಲು ಹಾಕಲು ಸಾಧ್ಯವಾಗಿಲ್ಲವೆಂದು ಏಜೆನ್ಸಿ ತಿಳಿಸಿದೆ.
ಎಪ್ರಿಲ್ 2018ರಿಂದ ಜೂನ್ 2018ರ ನಡುವೆ ಯಸ್ ಬ್ಯಾಂಕ್ 3700 ಕೋಟಿ ರೂ ಮೌಲ್ಯದ ಡಿಬೆಂಚರ್‌ಗಳನ್ನು ದೆವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಶನ್‌ನಿಂದ ಖರೀದಿಸಿತ್ತೆಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಡಿಬೆಂಚರ್ ಎಂದರೆ ಒಂದು ಕಂಪೆನಿಯು ತನ್ನ ಚಟುವಟಿಕೆಗಳ ನಿರ್ವಹಣೆಗೆ ಬೇಕಾದ ಹಣವನ್ನು ಹೊರಗಿನಿಂದ ಸಂಗ್ರಹಿಸುವಂತಹ ಒಂದು ರೀತಿಯ ಹೂಡಿಕೆಯಾಗಿದೆ. ಇದೇ ಅವಧಿಯಲ್ಲಿ ದೆವಾನ್ ಹೌಸಿಂಗ್ ಫೈನಾನ್ಸ್ ಕಂಪೆನಿಯು ಕಪೂರ್ ಅವರ ಮೂವರು ಪುತ್ರಿಯರ ಮಾಲಕತ್ವದ ಡುಇಟ್ ಆರ್ಬನ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನ ಖಾಸಗಿ ಕಂಪೆನಿಗೆ 600 ಕೋಟಿ ರೂ. ಸಾಲವನ್ನು ನೀಡಿತ್ತು.
ದೆವಾನ್ ಕಾರ್ಪೊರೇಶನ್‌ನಿಂದ ಡಿಬೆಂಚರ್‌ಗಳನ್ನು ಖರೀದಿಸಲು ಯಸ್‌ಬ್ಯಾಂಕ್ ಸಾರ್ವಜನಿಕ ಹಣವನ್ನು ಬಳಸಿಕೊಂಡಿತ್ತೆಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. ಈ ಇಡೀ ಕೃತ್ಯವನ್ನು ಮರೆಮಾಚುವ ಉದ್ದೇಶದಿಂದಲೇ ಡುಇಟ್ ಡುಇಟ್ ಆರ್ಬನ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಸಾಲವನ್ನು ನೀಡಲಾಗಿತ್ತು. ಕಪೂರ್ ಪುತ್ರಿಯರ ಒಡೆತನದ ಈ ಕಂಪೆನಿಯು ಯಾವುದೇ ಔದ್ಯಮಿಕ ಚಟುವಟಿಕೆಗಳನ್ನು ನಡೆಸುತ್ತಿರಲಿಲ್ಲವೆನ್ನಲಾಗಿದೆ.
‘‘ಈ ಸಾಲಗಳು ಮಂಜೂರಾದ ಬಳಿಕ ಯಸ್ ಬ್ಯಾಂಕ್ ದೆವಾನ್‌ನಲ್ಲಿ ಸಾಲವನ್ನು ಹೂಡಿಕೆ ಮಾಡಿತ್ತು ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ಮಿತಿಮೀರಿದ ಬೆಲೆಯನ್ನು ಕಟ್ಟಿದ ಆಸ್ತಿಗಳನ್ನು ಅಡವಿಡುವ ಮೂಲಕ ಸಾಲವನ್ನು ಪಡೆಯಲು ರಾಣಾ ಕಪೂರ್, ಕಪಿಲ್ ಹಾಗೂ ಧೀರಜ್‌ವಾಧ್ವಾನ್ ನಡೆಸಿದ ಕ್ರಿಮಿನಲ್ ಸಂಚು ಇದಾಗಿದೆಯೆಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.
ಈ ಮಧ್ಯೆ ಮುಂಬೈನ ಬಾಂದ್ರಾದ ರಿಕ್ಲಮೇಶನ್ ಪ್ರಾಜೆಕ್ಟ್ ಅನ್ನು ಅಭಿವೃದ್ಧಿಗಾಗಿ ಯಸ್ ಬ್ಯಾಂಕ್ 750 ಕೋಟಿ ರೂ.ಗಳ ಸಾಲವನ್ನು ಮಂಜೂರು ಮಾಡಿತ್ತು. ಆದರೆ ಈ ಯೋಜನೆಯು ಯಾವತ್ತೂ ಪ್ರಾರಂಭವಾಗಲಿಲ್ಲ ಹಾಗೂ ಈ ಮೊತ್ತವನ್ನು ವಾಧ್ವಾನ್‌ಗಳು ಕಪ್ಪು ಬಿಳುಪುಗೊಳಿಸಿದ್ದರು ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.