"ಯುವಜನತೆಯ ಹಾದಿ ತಪ್ಪಿಸುತ್ತಿದೆ": ಟಿಕ್‌ಟಾಕ್, ಪಬ್-ಜಿ ಅಪ್ಲಿಕೇಶ್‌ ಗೆ ನಿಷೇಧ ಹೇರಿದ ತಾಲಿಬಾನ್

Update: 2022-04-24 18:31 GMT

 ಕಾಬೂಲ್, ಎ.24: ಟಿಕ್‌ಟಾಕ್ ಹಾಗೂ ಪಬ್ಜಿ ಅಫ್ಗಾನಿಸ್ತಾನದ ಯುವಜನತೆಯ ಹಾದಿ ತಪ್ಪಿಸುವುದರಿಂದ ಅವುಗಳನ್ನು ನಿಷೇಧಿಸಲಾಗಿದೆ ಎಂದು ತಾಲಿಬಾನ್ ಘೋಷಿಸಿದೆ.

 ಕಳೆದ ಆಗಸ್ಟ್ನಲ್ಲಿ ಅಫ್ಗಾನಿಸ್ತಾನದಲ್ಲಿ ಅಧಿಕಾರಕ್ಕೆ ಬಂದ ಬಳಿಕ ತಾಲಿಬಾನ್ ದೇಶದಲ್ಲಿ ಸಂಗೀತ, ಸಿನೆಮ ಹಾಗೂ ಟಿವಿ ವಾಹಿನಿಗಳ ಧಾರಾವಾಹಿಯನ್ನು ನಿಷೇಧಿಸಿತ್ತು. ಆ ಬಳಿಕ ಮನರಂಜನೆಗಾಗಿ ಯುವಜನತೆ ಮೊಬೈಲ್ ಫೋನ್ ನ ಆ್ಯಪ್ಗಳ ಮೊರೆಹೋಗಿದ್ದರು. ಇದೀಗ ವಿಡಿಯೊ ಶೇರ್ ಮಾಡಿಕೊಳ್ಳುವ ಜನಪ್ರಿಯ ಆ್ಯಪ್ಗಳಾದ ಟಿಕ್ಟಾಕ್ ಮತ್ತು ಪಬ್ಜಿಯ ಸರದಿಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
 

ಈ ಆ್ಯಪ್ಗಳು ಯುವಜನರ ದಾರಿ ತಪ್ಪಿಸುತ್ತಿರುವ ಕಾರಣ ಅವನ್ನು ನಿಷೇಧಿಸುವಂತೆ ದೂರಸಂಪರ್ಕ ಇಲಾಖೆಗೆ ಸೂಚಿಸಲಾಗಿದೆ ಎಂದು ಸಚಿವ ಸಂಪುಟ ಹೇಳಿದೆ. ಅಲ್ಲದೆ ಟಿವಿ ವಾಹಿನಿಗಳಲ್ಲಿ ಅನೈತಿಕ ಅಂಶಗಳನ್ನು ಪ್ರಸಾರ ಮಾಡದಂತೆ ಕ್ರಮ ಕೈಗೊಳ್ಳಬೇಕು. ಟಿವಿಗಳಲ್ಲಿ ಸುದ್ಧಿ ಮತ್ತು ಧಾರ್ಮಿಕ ಕಾರ್ಯಕ್ರಮ ಪ್ರಸಾರವಾದರೆ ಸಾಕು ಎಂದು ಸಚಿವ ಸಂಪುಟದ ಹೇಳಿಕೆ ತಿಳಿಸಿದೆ.

ಸುಮಾರು 38 ಮಿಲಿಯನ್ ಜನರಿರುವ ಅಫ್ಗಾನ್ನಲ್ಲಿ ಸುಮಾರು 9 ಮಿಲಿಯನ್ ಜನತೆ ಇಂಟರ್ನೆಟ್ ಬಳಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರ ಸಂಖ್ಯೆ 4 ಮಿಲಿಯ ಆಗಿದ್ದು ಫೇಸ್ಬುಕ್ ಅತ್ಯಂತ ಜನಪ್ರಿಯ ವೇದಿಕೆಯಾಗಿದೆ ಎಂದು ಕಳೆದ ಜನವರಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿರುವುದಾಗಿ ಡೇಟಾರಿಪೋರ್ಟಲ್ ಸಂಸ್ಥೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News