ಉಕ್ರೇನ್ ಗಡಿ ಸನಿಹ ಇಸ್ಕಾಂಡರ್ ಕ್ಷಿಪಣಿ ಉಡಾವಣಾ ವ್ಯವಸ್ಥೆ ನಿಯೋಜಿಸಿದ ರಶ್ಯ
ಕೀವ್, ಎ.24: ಉಕ್ರೇನ್ ಗಡಿಯ ಸನಿಹ ರಶ್ಯವು ಇಸ್ಕಾಂಡರ್ ಎಂ- ಕ್ಷಿಪಣಿ ಉಡಾವಣಾ ವ್ಯವಸ್ಥೆಯನ್ನು ನಿಯೋಜಿಸಿದೆ ಎಂದು ಉಕ್ರೇನ್ ಸಶಸ್ತ್ರ ಪಡೆಯ ಮುಖ್ಯಸ್ಥರು ರವಿವಾರ ಹೇಳಿದ್ದಾರೆ.
ಒಂದೆಡೆಯಿಂದ ಇನ್ನೊಂದೆಡೆಗೆ ಸ್ಥಳಾಂತರಿಸಬಲ್ಲ(ಮೊಬೈಲ್) ಇಸ್ಕಾಂಡರ್ ಕ್ಷಿಪಣಿ ಉಡಾವಣಾ ವ್ಯವಸ್ಥೆಯ ಮೂಲಕ ಹತ್ತಿರದ ವ್ಯಾಪ್ತಿಯ ಗುರಿಯೆಡೆಗೆ ಕ್ಷಿಪಣಿ ಉಡಾಯಿಸಬಹುದು. ಇದನ್ನು ಉಕ್ರೇನ್ನ ಉತ್ತರದ ಗಡಿಗಿಂತ ಸುಮಾರು 60 ಕಿಮೀ ವ್ಯಾಪ್ತಿಯೊಳಗೆ ಇರುವ ಬೆಲ್ಗೊರೊಡ್ ಪ್ರದೇಶದಲ್ಲಿ ನಿಯೋಜಿಸಲಾಗಿದೆ. ಜತೆಗೆ, ಇಲ್ಲಿಗೆ ಹೆಚ್ಚುವರಿ ಪಡೆಯನ್ನು ನಿಯೋಜಿಸುವ ಮೂಲಕ ರಶ್ಯ ಮತ್ತೊಂದು ರಣತಂತ್ರ ರೂಪಿಸಿದೆ ಎಂದು ಉಕ್ರೇನ್ನ ಸಶಸ್ತ್ರ ಪಡೆಯ ಹೇಳಿಕೆ ತಿಳಿಸಿದೆ. ಸೋವಿಯತ್ ಒಕ್ಕೂಟದ ಯುಗದ ಸ್ಕಡ್ ಕ್ಷಿಪಣಿಗೆ ಪರ್ಯಾಯವಾಗಿ ಅಭಿವೃದ್ಧಿಗೊಳಿಸಿರುವ ಇಸ್ಕಾಂಡರ್ ಕ್ಷಿಪಣಿ ವ್ಯವಸ್ಥೆಯನ್ನು ನೇಟೊ ಒಕ್ಕೂಟ ಎಸ್ಎಸ್-26 ಸ್ಟೋನ್ ಎಂಬ ಸಂಕೇತನಾಮದಿಂದ ಕರೆಯುತ್ತಿದೆ. 500 ಕಿ.ಮೀ ದೂರದ ಗುರಿಯನ್ನು ತಲುಪಬಲ್ಲ ಈ ಕ್ಷಿಪಣಿ ಪರಮಾಣು ಸಿಡಿತಲೆಯನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಸಂಪೂರ್ಣ ದಕ್ಷಿಣ ಉಕ್ರೇನ್ ಮೇಲೆ ನಿಯಂತ್ರಣ ಸಾಧಿಸುವುದು ತನ್ನ ಉದ್ದೇಶವಾಗಿದೆ ಎಂದು ರಶ್ಯ ಶುಕ್ರವಾರ ನೀಡಿರುವ ಹೇಳಿಕೆ, ಉಕ್ರೇನ್ ಅನ್ನು ನಿರಸ್ತ್ರೀಕರಣಗೊಳಿಸಲು ಬಯಸುವುದಾಗಿ ಆರಂಭದಲ್ಲಿ ನೀಡಿರುವ ಹೇಳಿಕೆಗಿಂತ ಭಿನ್ನವಾಗಿದ್ದು ರಶ್ಯದ ಆಕ್ರಮಣದ ಹಿಂದಿರುವ ವಿಶಾಲವಾದ ಗುರಿಯನ್ನು ಸೂಚಿಸುತ್ತದೆ ಎಂದು ಉಕ್ರೇನ್ ಹೇಳಿದೆ.