ಪಾಕ್ ವಿದೇಶ ಸಚಿವರಾಗಿ ಬಿಲಾವಲ್ ಶೀಘ್ರ ಪ್ರಮಾಣ ವಚನ : ಪಿಪಿಪಿ ಘೋಷಣೆ
ಇಸ್ಲಮಾಬಾದ್, ಎ.24: ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ(ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೊ ಝರ್ದಾರಿ ಮುಂದಿನ ಒಂದೆರಡು ದಿನದಲ್ಲಿ ಪಾಕಿಸ್ತಾನದ ವಿದೇಶ ವ್ಯವಹಾರ ಇಲಾಖೆಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಪಿಪಿಪಿಯ ಹಿರಿಯ ಮುಖಂಡರು ಹೇಳಿದ್ದು, ಇದರೊಂದಿಗೆ ನೂತನ ಸರಕಾರದ ಮೈತ್ರಿಕೂಟದಲ್ಲಿ ತೀವ್ರ ಭಿನ್ನಾಭಿಪ್ರಾಯವಿದೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಮಂಗಳವಾರ ಸಚಿವ ಸಂಪುಟದ ಇತರ ಸದಸ್ಯರ ಜತೆ ಬಿಲಾವಲ್ ಭುಟ್ಟೊ ಪ್ರಮಾಣ ವಚನ ಸ್ವೀಕರಿಸಿರಲಿಲ್ಲ. ಇದರಿಂದ ಸಚಿವ ಹುದ್ದೆ ಸ್ವೀಕರಿಸಲು ಭುಟ್ಟೊಗೆ ಇಷ್ಟವಿಲ್ಲ ಎಂಬ ಊಹಾಪೋಹ ಹಬ್ಬಿತ್ತು. ಅದರ ಮರುದಿನ ಲಂಡನ್ಗೆ ತೆರಳಿದ್ದ ಭುಟ್ಟೊ ಅಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ, ಪಿಎಂಎಲ್-ಎನ್ ಪಕ್ಷದ ಹಿರಿಯ ಮುಖಂಡ ನವಾರ್ ಶರೀಫ್ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಮಾತುಕತೆಯ ಸಂದರ್ಭ ರಾಜಕೀಯ ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ ವಿಷಯದಲ್ಲಿ ಜತೆಗೂಡಿ ಕಾರ್ಯನಿರ್ವಹಿಸಲು ಉಭಯ ಮುಖಂಡರು ಪ್ರತಿಜ್ಞೆ ಮಾಡಿದರು ಎಂದು ಪಿಪಿಪಿ ಮುಖಂಡ ಮತ್ತು ಪಾಕ್ ಪ್ರಧಾನಿಗೆ ಕಾಶ್ಮೀರ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್ ವ್ಯವಹಾರದ ಸಲಹೆಗಾರ ಖಮರ್ ಝಮಾನ್ ಕೈರಾ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.
ಪಾಕಿಸ್ತಾನದ 2 ಪ್ರಮುಖ ರಾಜಕೀಯ ಪಕ್ಷಗಳಾದ ಪಿಪಿಪಿ ಮತ್ತು ಪಿಎಂಎಲ್-ಎನ್ ಪಕ್ಷಗಳು ಈಗ ಪಾಕಿಸ್ತಾನದಲ್ಲಿ ಅಧಿಕಾರದಲ್ಲಿರುವ ಮೈತ್ರಿಕೂಟದ ಪ್ರಮುಖ ಸದಸ್ಯರಾಗಿವೆ. ಪದಚ್ಯುತ ಪ್ರಧಾನಿ ಇಮ್ರಾನ್ಖಾನ್ ಅವರ ಆಡಳಿತಾವಧಿಯಲ್ಲಿ ಅರ್ಥವ್ಯವ್ಥೆಯ ವಿನಾಶಕಾರಿ ತಪ್ಪು ನಿರ್ವಹಣೆ ಮತ್ತು ಸರಕಾರದ ಅಸಮರ್ಥತೆಯಿಂದಾಗಿ ಪಾಕಿಸ್ತಾನದ ಜನತೆಗೆ ಅಪಾರ ಹಾನಿ ಮತ್ತು ಸಮಸ್ಯೆಯಾಗಿದೆ. ಇವನ್ನು ತಕ್ಷಣ ಸರಿಪಡಿಸುವ ಅಗತ್ಯವಿದೆ. ಇಮ್ರಾನ್ ಖಾನ್ ಅವರಿಂದಾಗಿ ಪತನದ ಅಂಚಿಗೆ ಸಾಗಿರುವ ಅರ್ಥವ್ಯವಸ್ಥೆಯನ್ನು ಮರಳಿ ಹಳಿಗೆ ತರುವ ಮಹತ್ತರ ಸವಾಲಿದೆ. ವಿದೇಶ ಕಾರ್ಯನೀತಿಯಲ್ಲಿ ಅವರು ಎಸಗಿರುವ ಭಯಾನಕ ಪ್ರಮಾದಗಳನ್ನು ನಿವಾರಿಸುವ ಕಾರ್ಯವಾಗಬೇಕು. ಪಾಕಿಸ್ತಾನದ ಜನತೆ ಮತ್ತು ದೇಶದ ಹಿತಾಸಕ್ತಿಗಾಗಿ ಉಭಯ ಪಕ್ಷಗಳು ಜತೆಗೂಡಿ ಕಾರ್ಯನಿರ್ವಹಿಸಲಿವೆ ಎಂದು ಸಭೆಯ ಬಳಿಕ ಉಭಯ ಮುಖಂಡರು ಹೇಳಿಕೆ ನೀಡಿದ್ದಾರೆ.