×
Ad

ಟರ್ಕಿ: ಸಿರಿಯಾಕ್ಕೆ ಪ್ರಯಾಣಿಸುವ ರಶ್ಯ ವಿಮಾನಗಳಿಗೆ ವಾಯುಪ್ರದೇಶ ನಿಷೇಧ

Update: 2022-04-25 00:36 IST
photo:twitter

ಇಸ್ತಾನ್ಬುಲ್, ಎ.24: ಸಿರಿಯಾಕ್ಕೆ ಪ್ರಯಾಣಿಸುವ ರಶ್ಯದ ನಾಗರಿಕ ಮತ್ತು ಮಿಲಿಟರಿ ವಿಮಾನಗಳು ಟರ್ಕಿಯ ವಾಯುಪ್ರದೇಶ ಬಳಸುವುದನ್ನು ನಿಷೇಧಿಸಲಾಗಿದೆ ಎಂದು ಟರ್ಕಿಯ ವಿದೇಶ ಸಚಿವ ಮೆವ್ಲತ್ ಕವುಸೊಗ್ಲು ಹೇಳಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ನೇಟೊದ ರಕ್ಷಣಾ ಒಕ್ಕೂಟದ ಸದಸ್ಯನಾಗಿದ್ದರೂ ಟರ್ಕಿಯು ರಶ್ಯದೊಂದಿಗೆ ನಿಕಟ ಸಂಬಂಧ ಹೊಂದಿದೆ. ಇದೀಗ ಉಕ್ರೇನ್ ಮೇಲಿನ ಆಕ್ರಮಣದ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮ ಕೈಗೊಂಡಿದೆ.
 
 ಸಿರಿಯಾದತ್ತ ತೆರಳುವ ರಶ್ಯದ ಸೇನಾ ವಿಮಾನ ಹಾಗೂ ನಾಗರಿಕ ವಿಮಾನಗಳಿಗೆ ನಮ್ಮ ವಾಯುಪ್ರದೇಶವನ್ನು ಮುಚ್ಚಿದ್ದೇವೆ. ರಶ್ಯನ್ನರ ಕೋರಿಕೆ ಮೇರೆಗೆ ಎಪ್ರಿಲ್ವರೆಗೆ ಅನುಮತಿ ನೀಡಲಾಗಿದೆ. ಎಪ್ರಿಲ್ ಅಂತ್ಯಕ್ಕೆ ವಾಯುಪ್ರದೇಶ ಮುಚ್ಚಲಾಗುವುದು. ಮುಂದಿನ 3 ತಿಂಗಳು ಈ ನಿಷೇಧ ಜಾರಿಯಲ್ಲಿರುತ್ತದೆ ಈ ನಿರ್ಧಾರವನ್ನು ರಶ್ಯದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ಗೆ ತಿಳಿಸಲಾಗಿದೆ. ಅವರು ರಶ್ಯ ಅಧ್ಯಕ್ಷರಿಗೆ ಮಾಹಿತಿ ನೀಡುತ್ತಾರೆ ಎಂದು ಮೆವ್ಲತ್ ಕವುಸೊಗ್ಲು ಹೇಳಿದ್ದಾರೆ. ಟರ್ಕಿಯ ಘೋಷಣೆಯ ಬಗ್ಗೆ ರಶ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಿರಿಯಾದಲ್ಲಿ ಅಂತರ್ಯುದ್ಧ ತೀವ್ರಗೊಂಡಿದ್ದಾಗ ಸಿರಿಯಾದ ಅಧ್ಯಕ್ಷ ಬಾಶರ್ ಅಸಾದ್ಗೆ ರಶ್ಯ ಮತ್ತು ಇರಾನ್ ಬೆಂಬಲ ನೀಡಿದ್ದರೆ, ಟರ್ಕಿಯು ಸಿರಿಯಾದ ಬಂಡುಗೋರರನ್ನು ಬೆಂಬಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News