ಐವರಿಕೋಸ್ಟ್: 67 ಮಿಲಿಯನ್ ಡಾಲರ್ ಮೌಲ್ಯದ ಕೊಕೇನ್ ಜಫ್ತಿ
ಅಬಿದ್ಜಾನ್, ಎ.24: ಐವರಿಕೋಸ್ಟ್ ದೇಶದ ಪೊಲೀಸರು 2 ಟನ್ ಗೂ ಅಧಿಕ ಶುದ್ಧ ಕೊಕೇನ್ ಅನ್ನು ಜಫ್ತಿ ಮಾಡಿದ್ದು ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಸುಮಾರು 67.7 ಮಿಲಿಯನ್ ಡಾಲರ್ ಆಗಿದೆ. ಪ್ರಕರಣಕ್ಕೆ ಸಂಬಂಧಿಸಿ 9 ಮಂದಿಯನ್ನು ಬಂಧಿಸಲಾಗಿದೆ ಎಂದು ದೇಶದ ಆಂತರಿಕ ಸಚಿವಾಲಯ ಶನಿವಾರ ಹೇಳಿದೆ.
ದೇಶದ ವಾಣಿಜ್ಯ ರಾಜಧಾನಿ ಅಬಿದ್ಜಾನ್ ಮತ್ತು ಬಂದರು ನಗರ ಸ್ಯಾನ್ ಪೆಡ್ರೊದಲ್ಲಿ ಈ ತಿಂಗಳು ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ ಈ ದಾಖಲೆ ಪ್ರಮಾಣದ ಕೊಕೇನ್ ಜಫ್ತಿ ಮಾಡಲಾಗಿದೆ ಎಂದು ಇಲಾಖೆಯ ಹೇಳಿಕೆ ತಿಳಿಸಿದೆ. 1 ವರ್ಷದ ಹಿಂದೆ 1 ಟನ್ನಷ್ಟು ಕೊಕೇನ್ ಜಫ್ತಿ ಮಾಡಿದ್ದು ಇದುವರೆಗಿನ ದಾಖಲೆಯಾಗಿತ್ತು. ಬಂಧಿತರಲ್ಲಿ ಸ್ಥಳೀಯರು ಮತ್ತು ವಿದೇಶಿ ನಾಗರಿಕರಿದ್ದು ವಿಚಾರಣೆಯ ಬಳಿಕ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ಇಲಾಖೆ ಹೇಳಿದೆ.
ದಕ್ಷಿಣ ಅಮೆರಿಕದಿಂದ ಯುರೋಪ್ಗೆ ಐವರಿಕೋಸ್ಟ್ ಮೂಲಕ ಅಕ್ರಮವಾಗಿ ಮಾದಕ ವಸ್ತು ಸಾಗಿಸುವ ಹಲವು ಜಾಲಗಳಿದ್ದು ಈ ಮಾರ್ಗದ ಮೂಲಕ ವಾರ್ಷಿಕ ಸುಮಾರು 40 ಟನ್ಗಳಷ್ಟು ಕೊಕೇನ್ ಸಾಗಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.