ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ಮರು ಆಯ್ಕೆ: ಪ್ಯಾರಿಸ್ ನಲ್ಲಿ ಪ್ರತಿಭಟನೆ
ಪ್ಯಾರಿಸ್: ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಅವರು ರವಿವಾರ ಮರು ಆಯ್ಕೆಯಾದ ನಂತರ ಸೆಂಟ್ರಲ್ ಪ್ಯಾರಿಸ್‌ನಲ್ಲಿ ಪ್ರತಿಭಟನೆ ವ್ಯಕ್ತವಾಗಿದ್ದು, ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಅವರ ಮೇಲೆ ಅಶ್ರುವಾಯು ಸಿಡಿಸಿರುವುದು ಸಾಮಾಜಿಕ ಮಾಧ್ಯಮದ ದೃಶ್ಯಾವಳಿಯಿಂದ ಕಂಡುಬಂದಿದೆ.
ಚಾಟೆಲೆಟ್‌ನ ಕೇಂದ್ರ ನೆರೆಹೊರೆಯಲ್ಲಿ ಜಮಾಯಿಸಿದ ಬಹುತೇಕ ಯುವಕರಿದ್ದ ಗುಂಪನ್ನು ಚದುರಿಸಲು ಪೊಲೀಸರು ಪ್ರಯತ್ನಿಸುತ್ತಿರುವುದು ಟ್ವಿಟರ್‌ನಲ್ಲಿನ ಚಿತ್ರಗಳಿಂದ ಕಂಡುಬಂದಿದೆ.
ಮ್ಯಾಕ್ರಾನ್ ಅವರು ರವಿವಾರ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಲಪಂಥೀಯ ಪ್ರತಿಸ್ಪರ್ಧಿ ಮರೀನ್ ಲಾ ಪೆನ್ ಅವರನ್ನು ಭಾರೀ ಅಂತರದಿಂದ ಸೋಲಿಸಿದ್ದಾರೆ.
ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಎರಡನೇ ಅವಧಿಗೆ ಗೆದ್ದ ಕೆಲವೇ ಗಂಟೆಗಳ ನಂತರ ಸೆಂಟ್ರಲ್ ಪ್ಯಾರಿಸ್‌ನಲ್ಲಿ ತಮ್ಮ ಕಡೆಗೆ ನುಗ್ಗುತ್ತಿದ್ದ ಕಾರಿನ ಮೇಲೆ ಪೊಲೀಸರು ಗುಂಡು ಹಾರಿಸಿದ್ದು, ಕಾರಿನೊಳಗಿದ್ದ ಇಬ್ಬರನ್ನು ಕೊಲ್ಲಲಾಗಿದೆ ಎಂದು ಪೊಲೀಸ್ ಮೂಲವೊಂದು ಎಎಫ್‌ಪಿಗೆ ತಿಳಿಸಿದೆ.
ವಾಹನವು ಪ್ಯಾರಿಸ್‌ನ ಅತ್ಯಂತ ಹಳೆಯ ಸ್ಟ್ಯಾಂಡಿಂಗ್ ಸೇತುವೆಯಾದ ಪಾಂಟ್ ನ್ಯೂಫ್‌ನಲ್ಲಿ ಮಧ್ಯರಾತ್ರಿಯ ನಂತರ ಚಲಿಸುತ್ತಿತ್ತು. ಅದು ಪೊಲೀಸ್ ಚೆಕ್‌ಪಾಯಿಂಟ್‌ನಲ್ಲಿ ನಿಲ್ಲಿಸಲು ನಿರಾಕರಿಸಿತು. ಕಾರು ಅಧಿಕಾರಿಗಳ ಕಡೆಗೆ ವೇಗವಾಗಿ ನುಗ್ಗುತ್ತಿದ್ದಂತೆ ಪೊಲೀಸರು ಕಾರಿನ ಮೇಲೆ ಗುಂಡು ಹಾರಿಸಿದರು ಪೊಲೀಸ್ ಮೂಲಗಳು ತಿಳಿಸಿವೆ.
ವಾಹನದಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ ಹಾಗೂ ಇನ್ನೊಬ್ಬ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.