ಕೇಜ್ರಿವಾಲ್ ನಿವಾಸದಲ್ಲಿ ದಾಂಧಲೆ ಪ್ರಕರಣ: ತನಿಖೆಗೆ ಹಾಜರಾಗಲಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ

Update: 2022-04-26 16:45 GMT

ಹೊಸದಿಲ್ಲಿ, ಎ. 26: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಇಲ್ಲಿನ ನಿವಾಸದಲ್ಲಿ ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ಲೋಕ ಸಭಾ ಸಂಸದ ತೇಜಸ್ವಿ ಸೂರ್ಯ ಅವರಿಗೆ ದಿಲ್ಲಿ ಪೊಲೀಸರು ನಿರ್ದೇಶಿಸಿದ್ದಾರೆ.

 ವಿಚಾರಣೆಗೆ ಹಾಜರಾಗುವಂತೆ ತೇಜಸ್ವಿ ಸೂರ್ಯ ಅವರಿಗೆ ಪತ್ರ ಬರೆದು ಸೂಚಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಅವರು ಸಹಕಾರದ ಭರವಸೆ ನೀಡಿದ್ದಾರೆ ಹಾಗೂ ತನಿಖೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿ ದಿಲ್ಲಿಯಿಂದ 8 ಮಂದಿಯನ್ನು ಬಂಧಿಸಲಾಗಿದೆ. ಇದರೊಂದಿಗೆ ಒಟ್ಟು 26 ಮಂದಿಯನ್ನು ಬಂಧಿಸಿದಂತಾಗಿದೆ. ಅವರ ವಿಚಾರಣೆ ನಡೆಸಲಾಗುತ್ತಿದೆ. ತಾಂತ್ರಿಕ ಮೂಲಗಳ ಮೂಲಕ ಅವರನ್ನು ಗುರುತಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

‘‘ದಿ ಕಾಶ್ಮೀರ ಫೈಲ್ಸ್’’ ಚಿತ್ರದ ಕುರಿತ ಅರವಿಂದ ಕೇಜ್ರಿವಾಲ್ ಅವರು ನೀಡಿದ ಹೇಳಿಕೆ ವಿರುದ್ಧ ದಿಲ್ಲಿಯಲ್ಲಿರುವ ಅವರ ನಿವಾಸದ ಹೊರಗೆ ಬಿಜೆಪಿಯ ಯುವ ಘಟಕದ ಸದಸ್ಯರು ಮಾರ್ಚ್ 30ರಂದು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭ ಅವರ ನಿವಾಸದ ಸೊತ್ತುಗಳಿಗೆ ಹಾನಿ ಉಂಟು ಮಾಡಿದ್ದರು. ಘಟನೆಗೆ ಸಂಬಂಧಿಸಿ ಅನಾಮಿಕ ವ್ಯಕ್ತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News