ಆ್ಯಂಬುಲೆನ್ಸ್ ಗೆ ಅತ್ಯಧಿಕ ಶುಲ್ಕದ ಬೇಡಿಕೆ: ಪುತ್ರನ ಮೃತದೇಹವನ್ನು ಬೈಕ್ ನಲ್ಲಿ ಸಾಗಿಸಿದ ವ್ಯಕ್ತಿ

Update: 2022-04-26 17:02 GMT

ಹೈದರಾಬಾದ್, ಎ.26: ಆಸ್ಪತ್ರೆಯೊಂದರಲ್ಲಿ ಖಾಸಗಿ ಆ್ಯಂಬುಲೆನ್ಸ್ ಚಾಲಕರು ಅತ್ಯಧಿಕ ಶುಲ್ಕದ ಬೇಡಿಕೆ ಇರಿಸಿದ ಹಾಗೂ ಮತ್ತೊಂದು ಆ್ಯಂಬುಲೆನ್ಸ್ ಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ತನ್ನ 10 ವರ್ಷದ ಪುತ್ರನ ಮೃತದೇಹವನ್ನು ಊರಿಗೆ ಬೈಕ್ನಲ್ಲಿ ಕೊಂಡೊಯ್ದ ಹೃದಯವಿದ್ರಾವಕ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿ ಮಂಗಳವಾರ ನಡೆದಿದೆ.

ಶ್ರೀ ವೆಂಕಟೇಶ್ವರ ರಾಮನಾರಾಯಣ ಸರಕಾರಿ ಜನರಲ್ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗ್ಗೆ ನಡೆದ ಘಟನೆಗೆ ಸಂಬಂಧಿಸಿ 6 ಮಂದಿ ಆ್ಯಂಬುಲೆನ್ಸ್ ಚಾಲಕರನ್ನು ಪೊಲೀಸರು ಬಂಧಿಸಿದ್ದಾರೆ.

ಆಸ್ಪತ್ರೆಯಲ್ಲಿ ಕಿಡ್ನಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ವೈ. ಜೋಶುವ ಎಂಬ ಬಾಲಕ ಮೃತಪಟ್ಟಿದ್ದ. ಆತನ ತಂದೆ ವೈ. ಮುರಳಿ ಹಾಗೂ ಮಾವ ಬಾಲಕನ ಮೃತದೇಹವನ್ನು ಅನ್ನಮಯ್ಯ ಜಿಲ್ಲೆಯ ತಮ್ಮ ಚಿಟ್ವೆಲ್ ಗ್ರಾಮಕ್ಕೆ ಕೊಂಡೊಯ್ಯಲು ಆಸ್ಪತ್ರೆಯಲ್ಲಿ ನಿಲ್ಲಿಸಿದ್ದ ಖಾಸಗಿ ಆ್ಯಂಬುಲೆನ್ಸ್ ಚಾಲಕರನ್ನು ಸಂಪರ್ಕಿಸಿದ್ದರು. ಆದರೆ, ಆ್ಯಂಬುಲೆನ್ಸ್ ಚಾಲಕರು 90 ಕಿ.ಮೀ. ಪ್ರಯಾಣಕ್ಕೆ 18 ಸಾವಿರ ರೂಪಾಯಿಯಿಂದ 20 ಸಾವಿರ ರೂಪಾಯಿ ವರೆಗೆ ಶುಲ್ಕದ ಬೇಡಿಕೆ ಇರಿಸಿದ್ದರು. ಅದನ್ನು ನೀಡುವ ಪರಿಸ್ಥಿತಿಯಲ್ಲಿ ಮುರಳಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 

ಅನಂತರ ಮುರಳಿ ಅವರು ಗ್ರಾಮಸ್ಥರ ನೆರವು ಕೋರಿದರು. ಕೆಲವರು ಆಸ್ಪತ್ರೆಯಿಂದ 80 ಕಿ.ಮೀ. ದೂರದಲ್ಲಿರುವ ರಾಜಮ್ಪೇಟೆಯಿಂದ ಉಚಿತ ಆ್ಯಂಬುಲೆನ್ಸ್ ಒಂದನ್ನು ವ್ಯವಸ್ಥೆ ಮಾಡಿದರು. ಆದರೆ, ಆ್ಯಂಬುಲೆನ್ಸ್ ಆಸ್ಪತ್ರೆಗೆ ತಲುಪುತ್ತಿದ್ದಂತೆ, ಅಲ್ಲಿದ್ದ ಆ್ಯಂಬುಲೆನ್ಸ್ ಚಾಲಕರು ಆ್ಯಂಬುಲೆನ್ಸ್ ಆಸ್ಪತ್ರೆ ಪ್ರವೇಶಿಸದಂತೆ ತಡೆ ಹಿಡಿದರು ಹಾಗೂ ಚಾಲಕನ ಮೇಲೆ ಹಲ್ಲೆ ನಡೆಸಿದರು. ಹಲ್ಲೆಗೊಳಗಾದ ಚಾಲಕ ಆ್ಯಂಬುಲೆನ್ಸ್ ನ ಮಾಲಕನಿಗೆ ಕರೆ ಮಾಡಿ ವಿಷಯ ತಿಳಿಸಿದ. ಆ್ಯಂಬುಲೆನ್ಸ್ ನ ಮಾಲಕ ಇನ್ನೋರ್ವ ಚಾಲಕನನ್ನು ಬೈಕ್ನಲ್ಲಿ ಕಳುಹಿಸಿದರು. ಆದರೆ, ಮುರಳಿ ಪುತ್ರನ ಮೃತದೇಹವನ್ನು ಬೈಕ್ನಲ್ಲಿ ತಿರುಪತಿಯ ಹೊರವಲಯದ ವರೆಗೆ ಸಾಗಿಸಿದರು. ಅಲ್ಲಿಂದ ಆ್ಯಂಬುಲೆನ್ಸ್ ಒಂದನ್ನು ಬಾಡಿಗೆ ಪಡೆದು ತನ್ನೂರಿಗೆ ಕೊಂಡೊಯ್ದರು. ನಾವು ಆರು ಮಂದಿ ಆ್ಯಂಬುಲೆನ್ಸ್ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದು ಉಪ ಪೊಲೀಸ್ ಅಧೀಕ್ಷಕ (ತಿರುಪತಿ ಪೂರ್ವ) ಟಿ. ಮುರಳಿ ಕೃಷ್ಣ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News