×
Ad

ಕೊರೋನ ಸೋಂಕು ಆತಂಕ ಬೇಡ

Update: 2022-04-27 11:22 IST

ಮಾಸ್ಕ್ ಧಾರಣೆ ಕಡ್ಡಾಯ ನಿಯಮ ಮತ್ತು ಇತರ ನಿರ್ಬಂಧಗಳನ್ನು ನಾವು ಎಷ್ಟು ಸಮಯ ಮುಂದುವರಿಸಿಕೊಂಡು ಹೋಗಬಹುದು? ಸದ್ಯಕ್ಕೆ, ಜನರು ಸೋಂಕಿಗೆ ಒಳಗಾಗುತ್ತಿರುವರಾದರೂ, ಕಾಯಿಲೆಯು ಸೌಮ್ಯವಾಗಿದೆ. ಹಾಗಾಗಿ, ಲಾಕ್‌ಡೌನ್ ಹೇರುವ ಮತ್ತು ಶಾಲೆಗಳನ್ನು ಮುಚ್ಚುವಂಥ ಕಠಿಣ ನಿರ್ಬಂಧಗಳನ್ನು ಹೇರುವ ಅಗತ್ಯವಿಲ್ಲ

ಭಾರತದಲ್ಲಿ ಕಳೆದ ವಾರ ಕೋವಿಡ್-19 ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಸ್ವಲ್ಪ ಮಟ್ಟಿನ ಏರಿಕೆಯಾಗಿದೆ. ರವಿವಾರದಿಂದ ಸೋಮವಾರದವರೆಗಿನ 24 ಗಂಟೆಗಳ ಅವಧಿಯಲ್ಲಿ 2,514 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ. ಹಿಂದಿನ ಸೋಮವಾರ (ಎಪ್ರಿಲ್ 18) 2,183 ಪ್ರಕರಣಗಳು ವರದಿಯಾಗಿದ್ದವು. ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, ಈಗ (ಸೋಮವಾರ ಎಪ್ರಿಲ್ 25ರ ವೇಳೆಗೆ) ಒಟ್ಟು ಸೋಂಕು ಪೀಡಿತರಾಗಿರುವವರ ಸಂಖ್ಯೆ 16,522. ಎಪ್ರಿಲ್ 18ರಂದು ಈ ಸಂಖ್ಯೆ 11,542 ಆಗಿತ್ತು.

ವಾರದ ಪಾಸಿಟಿವಿಟಿ ದರ, ಅಂದರೆ ಪರೀಕ್ಷೆಗೊಳಪಟ್ಟ ಮಾದರಿಗಳಲ್ಲಿ ಸೋಂಕು ಇದೆ ಎಂಬುದಾಗಿ ಸಾಬೀತಾದ ಮಾದರಿಗಳ ಅನುಪಾತವು ಎಪ್ರಿಲ್ 18ರಂದು ಇದ್ದ 0.32ಶೇ.ಕ್ಕಿಂತ ಎಪ್ರಿಲ್ 25ರಂದು 0.54ಶೇ.ಕ್ಕೆ ಏರಿದೆ. ಈ ಅವಧಿಯಲ್ಲಿ ಪರೀಕ್ಷೆಗೊಳಗಾದ ಮಾದರಿಗಳ ಸಂಖ್ಯೆ ಎಪ್ರಿಲ್ 18ರಂದು 2.6 ಲಕ್ಷ ಇದ್ದದ್ದು, ಎಪ್ರಿಲ್ 25ರಂದು 3.02 ಲಕ್ಷಕ್ಕೆ ಏರಿದೆ.

ದೇಶಾದ್ಯಂತ ಕೋವಿಡ್-19ಕ್ಕೆ ಸಂಬಂಧಿಸಿದ ಎಲ್ಲ ನಿರ್ಬಂಧಗಳನ್ನು ತೆಗೆದುಹಾಕಿದ ವಾರಗಳ ಬಳಿಕ ಸೋಂಕು ಪ್ರಕರಣಗಳು ಮತ್ತು ಪಾಸಿಟಿವಿಟಿ ದರದಲ್ಲಿ ಏರಿಕೆ ಕಂಡು ಬಂದಿದೆ.

 ಸೋಂಕು ಪ್ರಕರಣಗಳು ಎಲ್ಲಿ ಹೆಚ್ಚುತ್ತಿವೆ?

ಈಗ ಹೆಚ್ಚಿನ ಸೋಂಕು ಪ್ರಕರಣಗಳು ದಿಲ್ಲಿ ಹಾಗೂ ಅದರ ನೆರೆಯ ರಾಜ್ಯಗಳಾದ ಉತ್ತರಪ್ರದೇಶ ಮತ್ತು ಹರ್ಯಾಣಗಳಲ್ಲಿ ವರದಿಯಾಗುತ್ತಿವೆ. ಎಪ್ರಿಲ್ 24ರಿಂದ 25ರ ನಡುವಿನ 24 ಗಂಟೆಗಳ ಅವಧಿಯಲ್ಲಿ ವರದಿಯಾಗಿರುವ 2,541 ಸೋಂಕು ಪ್ರಕರಣಗಳ ಪೈಕಿ ಸುಮಾರು 1,000 ದಿಲ್ಲಿಯಿಂದಲೇ ವರದಿಯಾಗಿದೆ.

ಎಪ್ರಿಲ್ ಮಧ್ಯ ಭಾಗದಿಂದ ದಿಲ್ಲಿಯಲ್ಲಿ ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆಯಲಿ್ಲ ಹೆಚ್ಚಳವಾಗಲು ಆರಂಭಿಸಿತು. ಅಂದರೆ, ಮಾಸ್ಕ್ ಧಾರಣೆ ಕಡ್ಡಾಯ ಎನ್ನುವ ನಿಯಮದಿಂದ ವಿನಾಯಿತಿ ನೀಡಿದ ಎರಡು ವಾರಗಳ ಬಳಿಕ ಇದು ಸಂಭವಿಸಿತು. ಬಳಿಕ, ದಿಲ್ಲಿ ಹಾಗೂ ಹರ್ಯಾಣದ ನಾಲ್ಕು ಜಿಲ್ಲೆಗಳು ಮತ್ತು ಉತ್ತರಪ್ರದೇಶದ ಐದು ಜಿಲ್ಲೆಗಳಲ್ಲಿ ಮಾಸ್ಕ್ ಧಾರಣೆಯನ್ನು ಕಡ್ಡಾಯಗೊಳಿಸಲಾಯಿತು.

ಸೋಂಕು ಪ್ರಕರಣಗಳು ಜನವರಿಯಲ್ಲಿ ಏರಿಕೆ ಕಂಡ ಬಳಿಕ ಇಳಿದವು. ಆನಂತರ ದಿಲ್ಲಿಯಲ್ಲಿ ಎಪ್ರಿಲ್ ಮಧ್ಯ ಭಾಗದಲ್ಲಿ ಮತ್ತೊಮ್ಮೆ ಏರಿಕೆ ಕಂಡವು. ಈಗ ಅದು ಅಲ್ಲಿಗೇ ಸ್ಥಗಿತಗೊಂಡಂತೆ ಕಾಣುತ್ತದೆ. ಕಳೆದ ಐದು ದಿನಗಳ ಅವಧಿಯಲ್ಲಿ ಪ್ರತಿ ದಿನ ಸುಮಾರು 1,000 ಹೊಸ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ.

ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಕಡಿತವಾಗಿರುವುದನ್ನು ಗಮನಿಸಿ, ಎಪ್ರಿಲ್ ಆರಂಭದಲ್ಲಿ ಶಾಲೆಗಳನ್ನು ಪುನರಾರಂಭಿಸಲಾಯಿತು ಹಾಗೂ ಮಾಸ್ಕ್ ಧಾರಣೆಯನ್ನು ಕಡ್ಡಾಯ ಮುಕ್ತಗೊಳಿಸಲಾಯಿತು. ಆದರೆ, ಎಪ್ರಿಲ್ ಮಧ್ಯ ಭಾಗದ ವೇಳೆಗೆ ರಾಷ್ಟ್ರ ರಾಜಧಾನಿಯಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ನಿಧಾನವಾಗಿ ಹೆಚ್ಚಿತು. ಸುಮಾರು ಎರಡು ವಾರಗಳ ಅವಧಿಯಲ್ಲಿ ದಿನಕ್ಕೆ ಸುಮಾರು 100 ಇದ್ದದ್ದು 1,000ಕ್ಕೆ ಏರಿತು.

ಆದರೆ, ಈ ಹೆಚ್ಚಳವು ಈ ಹಿಂದೆ ದಿಲ್ಲಿಯಲ್ಲಿ ಕಂಡುಬಂದಷ್ಟು ಅಗಾಧವಾಗಿಯೇನೂ ಇಲ್ಲ. ಪ್ರಸಕ್ತ ಅವಧಿಯಲ್ಲಿ, 16 ದಿನಗಳಲ್ಲಿ ಸೋಂಕು ಪ್ರಕರಣಗಳು ದಿನಕ್ಕೆ ಸುಮಾರು 100ರಿಂದ 1,000ದವರೆಗೆ ಹೆಚ್ಚಿದವು. ಈ ಮಾದರಿಯ ಹೆಚ್ಚಳಕ್ಕೆ, ಡಿಸೆಂಬರ್-ಜನವರಿ ಅವಧಿಯಲ್ಲಿ ಕೇವಲ 10 ದಿನಗಳು ತಗಲಿದ್ದವು. ಸೋಂಕು ಪ್ರಕರಣಗಳು 12 ದಿನಗಳಲ್ಲಿ ದಿನಕ್ಕೆ 2,000ದ ಗಡಿಯನ್ನು ಮತ್ತು 15 ದಿನಗಳಲ್ಲಿ 5,000ದ ಗಡಿಯನ್ನು ದಾಟಿದವು.

ಬಳಿಕ, ಒಂದೇ ದಿನದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ 5,000ದಿಂದ 10,000ವನ್ನು ತಲುಪಿತು. ನಂತರದ ಏಳು ದಿನಗಳಲ್ಲಿ ಗರಿಷ್ಠ, ಅಂದರೆ 28,867 ಪ್ರಕರಣಗಳು ವರದಿಯಾದವು.

 ಸೋಂಕು ಪ್ರಕರಣಗಳ ಹೆಚ್ಚಳ ಕಳವಳಕ್ಕೆ ಕಾರಣವೇ?

‘‘ಜನರು ಮಾಸ್ಕ್ ಧರಿಸುವುದನ್ನು ನಿಲ್ಲಿಸಲು ಆರಂಭಿಸಿದ ಬಳಿಕ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ನಿರೀಕ್ಷಿಸಲಾಗಿತ್ತು. ಪ್ರಕರಣಗಳ ಸಂಖ್ಯೆಯಲ್ಲಿ ಆಗಾಗ ಹೆಚ್ಚಳ ಮತ್ತು ಕಡಿತ ಸಂಭವಿಸುತ್ತಲೇ ಇರುತ್ತದೆ. ಗಂಭೀರ ಪ್ರಕರಣಗಳು ಮತ್ತು ಸಾವಿನ ಸಂಖ್ಯೆಗೆ ಮಾತ್ರ ನಾವು ಮಹತ್ವ ಕೊಡುತ್ತೇವೆ’’ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಲ್ಲಿ ಸಾಂಕ್ರಾಮಿಕ ರೋಗಗಳ ವಿಭಾಗದ ಮಾಜಿ ಮುಖ್ಯಸ್ಥ ಡಾ. ಲಲಿತ್ ಕಾಂತ್ ಹೇಳಿದರು.

ಆಸ್ಪತ್ರೆಗಳಲ್ಲಿ ಕೊರೋನ ಸೋಂಕು ಪೀಡಿತರ ದಾಖಲಾತಿ ತುಂಬಾ ಕಡಿಮೆಯಾಗಿದೆ. ಲೋಕ ನಾಯಕ ಆಸ್ಪತ್ರೆ ಮತ್ತು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಂಸ್ಥೆ ಮುಂತಾದ ದೊಡ್ಡ ಆಸ್ಪತ್ರೆಗಳಲ್ಲಿ ಬೆರಳೆಣಿಕೆಯ ಪ್ರಕರಣಗಳು ದಾಖಲಾಗಿವೆ. ಹೀಗೆ ದಾಖಲಾಗಿರುವ ಹೆಚ್ಚಿನವರು ಅತಿ ಜ್ವರ, ಕೆಮ್ಮು, ಶೀತ ಮತ್ತು ಗಂಟಲು ಕೆರೆತದಿಂದ ಬಳಲುತ್ತಿದ್ದಾರೆ. ಅವರು ಮೂರರಿಂದ ಐದು ದಿನಗಳಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂಬುದಾಗಿ ವೈದ್ಯರು ಹೇಳುತ್ತಾರೆ.

ಸಾವುಗಳ ಸಂಖ್ಯೆಯಲ್ಲೂ ಅಲ್ಪ ಏರಿಕೆಯಾಗಿದೆ. ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಲು ಆರಂಭವಾದಂದಿನಿಂದ ಕಳೆದ 14 ದಿನಗಳಲ್ಲಿ 10 ಸಾವುಗಳು ಸಂಭವಿಸಿವೆ. ಅದಕ್ಕಿಂತ ಮೊದಲಿನ 14 ದಿನಗಳ ಅವಧಿಯಲ್ಲಿ ಆರು ಸಾವುಗಳು ಸಂಭವಿಸಿತ್ತು. ಆದರೆ, ವೈದ್ಯರು ಹೇಳುವ ಪ್ರಕಾರ, ಇತರ ಗಂಭೀರ ಕಾಯಿಲೆಗಳು ಇರುವವರು ಮತ್ತು ವೃದ್ಧ ರೋಗಿಗಳು ಮಾತ್ರ ಸಾವಿಗೀಡಾಗಿದ್ದಾರೆ.

ಹಾಗಾಗಿ, ರೋಗದ ಬಗ್ಗೆ ಚಿಂತಿಸುವ ಸಮಯ ಇನ್ನೂ ಬಂದಿಲ್ಲ. ಆದರೆ ನಾವು ವೈರಸ್ ಬಗ್ಗೆ ಎಚ್ಚರಿಕೆಯಿಂದಿರಬೇಕು.

 ಹೆಚ್ಚಿನ ನಿರ್ಬಂಧಗಳ ಅಗತ್ಯವಿದೆಯೇ?

ಕೊರೋನ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಿದಂದಿನಿಂದ, ಹೊರಗಡೆ ಮಾಸ್ಕ್‌ಗಳನ್ನು ಧರಿಸದವರಿಗೆ 500 ರೂಪಾಯಿ ದಂಡ ವಿಧಿಸುವುದನ್ನು ದಿಲ್ಲಿ ವಿಪತ್ತು ನಿರ್ವಹಣೆ ಪ್ರಾಧಿಕಾರ ಮತ್ತೆ ಜಾರಿಗೊಳಿಸಿದೆ. ಮಾಸ್ಕ್ ಧರಿಸಲು ಆದೇಶ ನೀಡುವ ಬದಲು, ಆರೋಗ್ಯ ಶಿಕ್ಷಣದ ಮೂಲಕ ಮಾಸ್ಕ್ ಧಾರಣೆಯನ್ನು ಜಾರಿಗೊಳಿಸಬೇಕು ಎಂಬುದಾಗಿ ಪರಿಣತರು ಅಭಿಪ್ರಾಯಪಡುತ್ತಾರೆ.

ಆದರೆ, ಮಾಸ್ಕ್ ಧರಿಸುವುದರ ಹೊರತಾಗಿ, ಈ ಹಂತದಲ್ಲಿ ಇತರ ನಿರ್ಬಂಧಗಳನ್ನು ಹೆಚ್ಚಿಸುವ ಅಗತ್ಯವಿಲ್ಲ ಎಂದು ಅವರು ಹೇಳುತ್ತಾರೆ. ‘‘ಮಾಸ್ಕ್ ಧಾರಣೆ ಕಡ್ಡಾಯ ನಿಯಮ ಮತ್ತು ಇತರ ನಿರ್ಬಂಧಗಳನ್ನು ನಾವು ಎಷ್ಟು ಸಮಯ ಮುಂದುವರಿಸಿಕೊಂಡು ಹೋಗಬಹುದು? ಸದ್ಯಕ್ಕೆ, ಜನರು ಸೋಂಕಿಗೆ ಒಳಗಾಗುತ್ತಿರುವರಾದರೂ, ಕಾಯಿಲೆಯು ಸೌಮ್ಯವಾಗಿದೆ. ಹಾಗಾಗಿ, ಲಾಕ್‌ಡೌನ್ ಹೇರುವ ಮತ್ತು ಶಾಲೆಗಳನ್ನು ಮುಚ್ಚುವಂಥ ಕಠಿಣ ನಿರ್ಬಂಧಗಳನ್ನು ಹೇರುವ ಅಗತ್ಯವಿಲ್ಲ’’ ಎಂದು ಸಾಂಕ್ರಾಮಿಕ ರೋಗಗಳ ತಜ್ಞ ಡಾ. ಚಂದ್ರಕಾಂತ್ ಲಹಾರಿಯ ಹೇಳುತ್ತಾರೆ.

Writer - ಅನೊನ್ನ ದತ್

contributor

Editor - ಅನೊನ್ನ ದತ್

contributor

Similar News