×
Ad

ಕೆಟಿಎಂ ಬೈಕನ್ನು ಇಲೆಕ್ಟ್ರಿಕ್ ಬೈಕಾಗಿ ಮಾಡಿದ ಐಟಿಐ ವಿದ್ಯಾರ್ಥಿ ಅಸದ್ ಅಬ್ದುಲ್ಲಾ

Update: 2022-04-27 11:35 IST

ಅಂತರರಾಷ್ಟ್ರೀಯ ತೈಲ ಬೆಲೆ ಏರಲಿ, ಇಳಿಯಲಿ; ಭಾರತ ಸರಕಾರದ ಕೃಪೆಯಿಂದ ಪೆಟ್ರೋಲ್, ಡೀಸೆಲ್ ಬೆಲೆ ಮಾತ್ರ ನಿರಂತರ ಏರುತ್ತಲೇ ಇದೆ. ಹೀಗಾಗಿ ಹಲವಾರು ಕಂಪೆನಿಗಳು ಇಲೆಕ್ಟ್ರಿಕ್ ವಾಹನಗಳ ಕುರಿತು ಸಂಶೋಧನೆ ಮಾಡುತ್ತಲೇ ಇವೆ, ಹೊಸ ವಾಹನಗಳನ್ನು ಬಿಡುಗಡೆ ಮಾಡುತ್ತಲೇ ಇವೆ.

ಪೆಟ್ರೋಲ್ ಬೆಲೆ ಏರಿಕೆಯಿಂದ ಹೆಚ್ಚು ಚಿಂತಿತರಾದವರು ಮಾತ್ರ ದ್ವಿಚಕ್ರ ವಾಹನ ಬಳಸುವ ಬಡ, ಮಧ್ಯಮ ವರ್ಗದವರು. ಆದುದರಿಂದಲೇ ಕಳೆದೊಂದು ವರ್ಷದಿಂದ ಇಲೆಕ್ಟ್ರಿಕ್ ದ್ವಿಚಕ್ರ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದ್ದು, ಕಳೆದ ವರ್ಷಕ್ಕೆ ಹೋಲಿಸಿದಾಗ ಇಂತಹ ವಾಹನಗಳ ಮಾರಾಟ 132 ಶೇಕಡಾ ಏರಿದೆ.

ಏನೇ ಇದ್ದರೂ, ಹೊಸ ವಾಹನಗಳನ್ನು ಖರೀದಿ ಮಾಡುವ ಆರ್ಥಿಕ ತಾಕತ್ತು ಎಲ್ಲರಿಗೂ ಇರಬೇಕಲ್ಲ. ಖರೀದಿ ಮಾಡಿದರೂ ಹಳೆಯ ದ್ವಿಚಕ್ರ ವಾಹನವನ್ನು ಯಾರ ತಲೆಗೆ ದಾಟಿಸುವುದು? ಗುಜುರಿಗೆ ಹಾಕುವುದೆ? ಈಗಿರುವ ಬೈಕನ್ನೇ ಸುಲಭವಾಗಿ ಇಲೆಕ್ಟ್ರಿಕ್ ಮಾಡುವ ಹಾಗಿದ್ದರೆ..!

ಉತ್ತರ ಪ್ರದೇಶದ ಆಝಂಗಢದ ಐಟಿಐ ಕಲಿಯುತ್ತಿರುವ ವಿದ್ಯಾರ್ಥಿ ಅಸದ್ ಅಬ್ದುಲ್ಲಾ ಎಂಬವರು ತನ್ನ ಕೆಟಿಎಂ ಬೈಕನ್ನು ಅದೇ ಕ್ಷಮತೆ ಉಳಿಸಿಕೊಂಡು ಇಲೆಕ್ಟ್ರಿಕ್ ಬೈಕಾಗಿ ಮಾಡಿ ಎಲ್ಲರ ಗಮನ ಸೆಳೆದಿದ್ದು, ಹಿಂದೂಸ್ತಾನ್ ಟೈಮ್ಸ್‌ನಂತ ಪತ್ರಿಕೆಗಳೂ ಆತನ ಸಾಧನೆ ಮೆಚ್ಚಿ ವರದಿ ಮಾಡಿವೆ.

ಈತನ ಬೈಕ್ ಈಗ ಒಂದು ಚಾರ್ಜಿನಲ್ಲಿ 130 ಕಿ.ಮೀ. ಓಡುವುದಲ್ಲದೆ, ಗಂಟೆಗೆ 140 ಕಿ.ಮೀ. ವೇಗದಲ್ಲೂ ಓಡುತ್ತದಂತೆ. ದೊಡ್ಡ ಕಂಪನಿಗಳ ದ್ವಿಚಕ್ರ ವಾಹನಗಳಲ್ಲೂ ಈ ಕ್ಷಮತೆ ಇಲ್ಲ. ಎರಡು ವರ್ಷಗಳ ಹಿಂದೆ ಈತ ಮಾಮೂಲಿ ಸೈಕಲಿಗೆ ಇಲೆಕ್ಟ್ರಿಕ್ ಇಂಜಿನ್ ಅಳವಡಿಸಿ ಸುದ್ದಿ ಮಾಡಿದ್ದರು. ಅದನ್ನು ವಿದ್ಯುತ್ ಮೋಟಾರಲ್ಲೂ ಓಡಿಸಬಹುದಿತ್ತು. ಅಥವಾ ಹೆಚ್ಚಿನ ಆಯಾಸ ಇಲ್ಲದೇ ಸುಲಭದಲ್ಲಿ ಪೆಡಲ್ ತುಳಿದೂ ಓಡಿಸಬಹುದಿತ್ತು.

ಈಗ ತನ್ನ ಕೆಟಿಎಂ 200 ಸಿಸಿ ಬೈಕನ್ನೇ ಪ್ರಯೋಗಕ್ಕೆ ಒಳಪಡಿಸಿದ ಅಸದ್, ಅದರ ಇಂಜಿನ್ ತೆಗೆದು 4000 ವ್ಯಾಟ್ ಮೋಟಾರ್ ಅಳವಡಿಸಿದರು. ಅದು 25 ಕೆ.ವಿ. ಶಕ್ತಿ ಬಿಡುಗಡೆ ಮಾಡುತ್ತದೆ. ನಂತರ ಭಾರತದ ದೊಡ್ಡ ಕಂಪೆನಿಗಳು ಬಳಸುವ ಚೀನಾದ ಕ್ಯೂಎಸ್ ಕಂಪೆನಿಯ ಮೋಟಾರ್ ರೆಗ್ಯೂಲೇಟರ್ ಅಳವಡಿಸಿದರು.

ತಾನು ಅದರಲ್ಲಿ ಸ್ವಲ್ಪ ಇಲೆಕ್ಟ್ರಾನಿಕ್ ಬದಲಾವಣೆ ಮಾಡಿದ್ದೇನೆ ಎಂದು ಹೇಳುವ ಆತನ ಈ ಗುಟ್ಟು ಟ್ರೇಡ್ ಸಿಕ್ರೆಟ್! ಇದರಿಂದಾಗಿ ಈ ಬೈಕಿನ ಸಾಧನೆ ದೊಡ್ಡ ಬೈಕ್‌ಗಳ ಸಾಧನೆಗಿಂತ ಉತ್ತಮವಾಗಿದೆಯಂತೆ. ಕೆಟಿಎಂ ಬೈಕಿನ ಪೆಟ್ರೋಲ್ ಟ್ಯಾಂಕಿಗೆ ಸರಿ ಹೊಂದುವ ಬ್ಯಾಟರಿ ಬಾಕ್ಸನ್ನು ಈತ ತಯಾರಿಸಿದ್ದಾರೆ. ಚಕ್ರಕ್ಕೆ ಹೆಚ್ಚುವರಿ ಹಬ್ ಮೋಟಾರ್ ಅಳವಡಿಸಿದ್ದಾರೆ. ಇದರಿಂದಾಗಿ ಬೈಕಿನ ಭಾರ ಹೆಚ್ಚಿ ಸ್ಥಿರತೆ ಸಿಗುತ್ತದೆ. ಉಳಿದಂತೆ ವಿನ್ಯಾಸದಲ್ಲಿ ಯಾವ ಬದಲಾವಣೆಯನ್ನೂ ಮಾಡಿಲ್ಲ.

ಅದಲ್ಲದೇ ವಿದ್ಯುತ್ ಚಾರ್ಜರನ್ನು ಹಿಂದಿನ ಪೆಟ್ರೋಲ್ ಟ್ಯಾಂಕ್ ಮೇಲೆಯೇ ಅಳವಡಿಸಿದ್ದಾರೆ. ಇದು ನಾಲ್ಕು ಗಂಟೆಗಳಲ್ಲಿ ಪೂರ್ಣ ಚಾರ್ಚ್ ಆಗುತ್ತದೆ. ಇನ್ನೂ ವೇಗದ ಚಾರ್ಜರ್ ಅಳವಡಿಸಬಹುದಾದರೂ, ಅದರಿಂದ ಬ್ಯಾಟರಿ ಬಾಳಿಕೆ ಕಡಿಮೆಯಾಗುತ್ತದೆ ಎನ್ನುತ್ತಾರವರು.

ಗಂಟೆಗೆ 125 ಕಿ.ಮೀ. ಓಡುವ ಈ ಬೈಕ್, ರೆಗ್ಯುಲೇಟರ್ ಸೆಟ್ಟಿಂಗ್ ಬದಲಿಸಿದರೆ, ಗಂಟೆಗೆ 140 ಕಿ.ಮೀ. ಓಡುತ್ತದೆ. ಇಂಟರ್ನಲ್ ಕಂಬಷನ್ ಇಂಜಿನಿನ ಕೆಟಿಎಂ ಬೈಕ್ ಗಂಟೆಗೆ 160 ಕಿ.ಮೀ. ಓಡುತ್ತದೆ.

"ನಾನೀಗ ನನ್ನ ಬೈಕ್ ಓಡಿಸಲು ಒಂದು ಪೈಸೆಯನ್ನೂ ಖರ್ಚು ಮಾಡುವುದಿಲ್ಲ. ವಿದ್ಯುತ್ ಜಾರ್ಜನ್ನೂ ಮಾಡುವುದಿಲ್ಲ. ಮೇಲೊಂದು ಸೋಲಾರ್ ಪ್ಯಾನೆಲ್ ಅಳವಡಿಸಿದ್ದೇನೆ" ಎಂದವರು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗೆ ತಿಳಿಸಿದ್ದಾರೆ.

ತನ್ನ ಸ್ವಂತ ಕಂಪೆನಿ ತೆರೆಯುವ ಯೋಚನೆಯಲ್ಲಿರುವ ಅವರು, ಹಣಕಾಸು ಒದಗಿಸಬಲ್ಲ ಪಾಲುದಾರರನ್ನು ಹುಡುಕುತ್ತಿದ್ದಾರಂತೆ. ಇಂತಹ ಯುವಕರ ಸಾಧನೆ ಉಳಿದವರಿಗೂ ಸ್ವತಂತ್ರವಾಗಿ ಯೋಚಿಸಲು, ಏನನ್ನಾದರೂ ಸಾಧಿಸಲು ಪ್ರೇರಣೆಯಾಗಲಿ ಎಂದು ನಾವು ಹಾರೈಸಬಹುದು.

-ನಿಕ್

ಚಿತ್ರ: ಹಿಂದೂಸ್ತಾನ್ ಟೈಮ್ಸ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News