ಪ್ರಧಾನಿಯ ಕುರಿತು ‘ಜುಮ್ಲಾ’ ಪದದ ಬಳಕೆ ಸೂಕ್ತವೇ ಎಂದು ಪ್ರಶ್ನಿಸಿದ ದಿಲ್ಲಿ ಹೈಕೋರ್ಟ್

Update: 2022-04-27 15:18 GMT

ಹೊಸದಿಲ್ಲಿ,ಎ.27: ದೇಶದ ಪ್ರಧಾನಿಯವರ ಕುರಿತು ಮಾತನಾಡುವಾಗ ‘ಜುಮ್ಲಾ ( ಸುಳ್ಳು ಭರವಸೆ)’ ಪದದ ಬಳಕೆಯು ಸೂಕ್ತವೇ ಎಂದು ಬುಧವಾರ ಪ್ರಶ್ನಿಸಿದ ದಿಲ್ಲಿ ಉಚ್ಚ ನ್ಯಾಯಾಲಯವು,ಸರಕಾರವನ್ನು ಟೀಕಿಸುವಾಗ ಲಕ್ಷ್ಮಣ ರೇಖೆಯೊಂದಿರಬೇಕು ಎಂದು ಹೇಳಿತು.

ಬಂಧನದಲ್ಲಿರುವ ಜೆಎನ್ಯುದ ಮಾಜಿ ವಿದ್ಯಾರ್ಥಿ ನಾಯಕ ಹಾಗೂ ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ನಡೆಸುತ್ತಿರುವ ಉಚ್ಚ ನ್ಯಾಯಾಲಯವು ಅವರ ಭಾಷಣದ ಧ್ವನಿಮುದ್ರಿಕೆಯನ್ನು ಆಲಿಸುತ್ತಿದ್ದಾಗ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.
 
ಈಶಾನ್ಯ ದಿಲ್ಲಿಯಲ್ಲಿ ಸಂಭವಿಸಿದ್ದ ಕೋಮು ಗಲಭೆಗಳಿಗೆ ಕೆಲವು ದಿನಗಳ ಮುನ್ನ 2020 ಫೆಬ್ರವರಿಯಲ್ಲಿ ಅಮರಾವತಿಯಲ್ಲಿ ಬಹಿರಂಗ ಭಾಷಣವನ್ನು ಮಾಡಿದ್ದ ಸಂದರ್ಭದಲ್ಲಿ ಖಾಲಿದ್ ‘ಜುಮ್ಲಾ’ ಪದವನ್ನು ಬಳಸಿದ್ದರು.

ಬುಧವಾರ ಭಾಷಣವನ್ನು ನ್ಯಾಯಾಲಯದಲ್ಲಿ ಕೇಳಿಸಿದ ಬಳಿಕ ಪೀಠದ ನೇತೃತ್ವ ವಹಿಸಿದ್ದ ನ್ಯಾ.ರಜನೀಶ ಭಟ್ನಾಗರ್,ಅವರು ಭಾಷಣದಲ್ಲಿ ಪ್ರಧಾನಿಯವರ ಕುರಿತು ಅದೇನು ಹೇಳುತ್ತಿದ್ದಾರೆ? ಏನೋ ‘ಚಂಗಾ ’ ಎಂಬ ಶಬ್ದ,ಬಳಿಕ ಭಾರತದ ಪ್ರಧಾನಿಯ ಕುರಿತು ಈ ‘ಜುಮ್ಲಾ’ ಪದ ಬಳಸಿದ್ದಾರೆ. ಇದು ಸೂಕ್ತವೇ ಎಂದು ಪ್ರಶ್ನಿಸಿದರು.

ಸಿಎಎ ವಿರುದ್ಧ ಪ್ರತಿಭಟನೆ ಸಂದರ್ಭದಲ್ಲಿ ಈ ಭಾಷಣವನ್ನು ಮಾಡಲಾಗಿತ್ತು ಎಂದು ತಿಳಿಸಿದ ಖಾಲಿದ್ ಪರ ವಕೀಲ ತ್ರಿದೀಪ ಪಾಯಸ್ ಅವರು,‘ಸರಕಾರದ ವಿರುದ್ಧ ಬಳಸಲಾದ ಪದಗಳು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯಡಿ ಅಪರಾಧವಾಗುವುದಿಲ್ಲ. ಸರಕಾರದ ವಿರುದ್ಧ ಟೀಕೆಯು ಅಪರಾಧವಾಗಲು ಸಾಧ್ಯವಿಲ್ಲ. ಸರಕಾರದ ವಿರುದ್ಧ ಮಾತನಾಡಿದ ವ್ಯಕ್ತಿಗೆ ಯುಎಪಿಎ ಅಡಿ ಆರೋಪದೊಂದಿಗೆ 583 ದಿನಗಳ ಜೈಲುವಾಸವನ್ನು ಕಲ್ಪಿಸಲೂ ಆಗುವುದಿಲ್ಲ. ನಾವು ಅಷ್ಟೊಂದು ಅಸಹಿಷ್ಣುಗಳಾಗಬಾರದು. ಇಷ್ಟು ಅಸಹಿಷ್ಣುತೆ ಇದ್ದರೆ ಜನರು ಮಾತನಾಡಲೂ ಸಾಧ್ಯವಾಗುವುದಿಲ್ಲ. ಖಾಲಿದ್ ವಿರುದ್ಧ ದಾಖಲಾಗಿರುವ ಪ್ರಕರಣವು ವಾಕ್ಸ್ವಾತಂತ್ರದ ವಿರುದ್ಧ ಅಸಹಿಷ್ಣುತೆಯ ಫಲಶ್ರುತಿಯಾಗಿದೆ ’ಎಂದರು.

‘ಚಂಗಾ’ ಶಬ್ದದ ಬಳಕೆ ಕುರಿತಂತೆ ಪಾಯಸ್,ಅದೊಂದು ವಿಡಂಬನೆಯಾಗಿದೆ. ಬಹುಶಃ ಪ್ರಧಾನಿಯವರು ಭಾಷಣವೊಂದರಲ್ಲಿ ‘ಸಬ್ ಚಂಗಾ ಸಿ(ಎಲ್ಲ ಚೆನ್ನಾಗಿದೆ)’ಎನ್ನುವುದನ್ನು ಬಳಸಿದ್ದಿರಬೇಕು ಎಂದರು. ಖಾಲಿದ್ ಭಾಷಣವು ಸಿಎಎ ವಿರೋಧಿ ಆಂದೋಲನ ಕುರಿತು ಮತ್ತು ಸರಕಾರದ ವಿರುದ್ಧವಾಗಿತ್ತು,ಹಿಂಸೆಗೆ ಕರೆ ನೀಡಿರಲಿಲ್ಲ ಎಂದೂ ಪಾಯಸ್ ನ್ಯಾಯಾಲಯಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News