ʻʻಹೇಟ್-ಇನ್-ಇಂಡಿಯಾ ಮತ್ತು ಮೇಕ್-ಇನ್-ಇಂಡಿಯಾ ಒಟ್ಟಿಗೆ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲʼʼ
ಹೊಸದಿಲ್ಲಿ: ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಇಂದು ಟ್ವೀಟ್ ಮಾಡಿ ʻʻಹೇಟ್-ಇನ್-ಇಂಡಿಯಾ ಮತ್ತು ಮೇಕ್-ಇನ್-ಇಂಡಿಯಾ ಒಟ್ಟಿಗೆ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲʼʼ ಎಂದು ಪ್ರಧಾನಿ ನರೇಂದ್ರ ಮೋದಿಗೆ ಹೇಳಿದ್ದಾರೆ. ಏಳು ಜಾಗತಿಕ ಬ್ರ್ಯಾಂಡ್‌ಗಳು ಭಾರತದಲ್ಲಿ ತಮ್ಮ ವ್ಯವಹಾರಗಳನ್ನು ಸ್ಥಗಿತಗೊಳಿಸಿದ ನಂತರ ರಾಹುಲ್ ಅವರ ಟ್ವೀಟ್ ಬಂದಿದೆ.
ಈ ಏಳೂ ಬ್ರ್ಯಾಂಡ್‌ಗಳು ಬಿಜೆಪಿ ಆಡಳಿತಾವಧಿಯಲ್ಲಿ ಭಾರತದಿಂದ ನಿರ್ಗಮಿಸಿವೆ ಎಂಬುದನ್ನು ತೋರಿಸುವ ಇಮೇಜ್ ಒಂದನ್ನೂ ರಾಹುಲ್ ಶೇರ್ ಮಾಡಿದ್ದಾರೆ. ಹೀಗೆ ಭಾರತ ತೊರೆದ ಕಂಪೆನಿಗಳಲ್ಲಿ ಶೆವರ್ಲೆ, ಮ್ಯಾನ್ ಟ್ರಕ್ಸ್, ಫಿಯೆಟ್, ಯುನೈಟೆಡ್ ಮೋಟರ್ಸ್, ಹಾರ್ಲೆ ಡೇವಿಡ್ಸನ್, ಫೋರ್ಡ್ ಮತ್ತು ಡಾಟ್ಸನ್ ಸೇರಿವೆ.
ಈ ಬ್ರ್ಯಾಂಡ್‌ಗಳು ದೇಶ ಬಿಟ್ಟಿರುವುದರಿಂದ ಉದ್ಯೋಗ ನಷ್ಟವಾಗಿದೆ ಎಂಬುದನ್ನೂ ರಾಹುಲ್ ಎತ್ತಿ ತೋರಿಸಿದ್ದಾರೆ.
ʻʻಭಾರತದಿಂದ ಉದ್ಯಮಗಳನ್ನು ಹೊರಗಟ್ಟುವ ಸುಲಭ ವಿಧಾನ, ಏಳು ಜಾಗತಿಕ ಬ್ರ್ಯಾಂಡ್‌ಗಳು, ಒಂಬತ್ತು ಫ್ಯಾಕ್ಟರಿಗಳು, 649 ಡೀಲರ್‌ಶಿಪ್‌ಗಳು, 84,000 ಉದ್ಯೋಗಗಳು (ಕಳೆದುಹೋಗಿವೆ),ʼʼ ಎಂದು ರಾಹುಲ್ ಟ್ವೀಟ್ ಮಾಡಿದ್ದಾರಲ್ಲದೆ ದೇಶದ ಗಂಭೀರ ನಿರುದ್ಯೋಗ ಸಮಸ್ಯೆಯತ್ತ ಗಮನ ಹರಿಸುವಂತೆ ಪ್ರಧಾನಿಯನ್ನು ಕೋರಿದ್ದಾರೆ.