×
Ad

​ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಕಡ್ಡಾಯವಲ್ಲ: ಉಡುಪಿ ಜಿಲ್ಲಾ ಕೃಷಿಕ ಸಂಘ

Update: 2022-04-28 18:47 IST

ಉಡುಪಿ : ರೈತರು ಬ್ಯಾಂಕುಗಳ ಮೂಲಕ ಕಿಸಾನ್ ಕ್ರೆಡಿಟ್ ಕಾರ್ಡ್ ಮಾಡಿಸಿಕೊಳ್ಳುವುದು ಕಡ್ಡಾಯವೇನಲ್ಲ. ಅದು ಐಚ್ಛಿಕ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಹಲವು ಬ್ಯಾಂಕುಗಳು ಎಲ್ಲಾ ರೈತರು ಕಿಸಾನ್ ಕಾರ್ಡ್ ಮಾಡಿಸಿಕೊಳ್ಳಬೇಕು, ಬ್ಯಾಂಕುಗಳಿಂದ ಕೃಷಿ ಸಾಲವನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಪ್ರಚಾರ ಮಾಡುತ್ತಿವೆ. ಇದು ಸರಕಾರದ ಆದೇಶ ಎಂಬಂತೆ ಬಿಂಬಿಸುವ ಪ್ರಯತ್ನ ಕೂಡಾ ಮಾಡಲಾಗುತ್ತಿದೆ. ಕೃಷಿಕರು ಕಿಸಾನ್ ಕ್ರೆಡಿಟ್ ಕಾರ್ಡನ್ನು ಮಾಡಿಸಿ ಕೊಳ್ಳದಿದ್ದರೆ ಇದೀಗ ಸರಕಾರ ನೀಡುತ್ತಿರುವ ಕಿಸಾನ್ ಸಮ್ಮಾನ್ ಹಣ ಸಿಗುವುದು ನಿಂತು ಹೋಗಲಿದೆ. ಮುಂದಿನ ದಿನಗಳಲ್ಲಿ ಕೃಷಿಕರಿಗೆ ಸಾಲ ಸಹಿತ ಸರಕಾರದ ಸೌಲಭ್ಯಗಳು ಸಿಗುವುದಿಲ್ಲ ಎಂದು  ಪ್ರಚಾರ ಮಾಡಲಾಗುತ್ತಿದೆ. ಇದು ಬ್ಯಾಂಕಿನ ಅಧಿಕಾರಿಗಳು ತಮ್ಮ ಗುರಿ ಸಾಧನೆ(ಟಾರ್ಗೆಟ್)ಗಾಗಿ ಮಾಡುತ್ತಿರುವ ಪ್ರಚಾರ ಅಷ್ಟೆ ಎಂದು ಸಂಘ ಸ್ಪಷ್ಟ ಪಡಿಸಿದೆ.

ಈ ಪ್ರಚಾರವನ್ನು ನಂಬಿ, ಸಾಲದ ಅಗತ್ಯವೇ ಇರದ ಕೃಷಿಕರು ಕೂಡ ಸಾಲ ಪಡೆದುಕೊಂಡು ಕೃಷಿ ಹೊರತಾದ ಅನ್ಯ ಅನಗತ್ಯ ವಿಷಯಗಳಿಗೆ ದುಂದುವೆಚ್ಚ ಮಾಡಿ ಮುಂದಿನ ದಿನಗಳಲ್ಲಿ ಆರ್ಥಿಕ ಸಮಸ್ಯೆಗಳ ಸುಳಿಗೆ ಸಿಲುಕುವ ಸಾಧ್ಯತೆ ಇದೆ ಎಂದು ಕೃಷಿಕ ಸಂಘ ಎಚ್ಚರಿಸಿದೆ.

ಕಿಸಾನ್ ಕ್ರೆಡಿಟ್ ಕಾರ್ಡ್ ಇಲ್ಲದೆಯೇ ಕೃಷಿಕರಿಗೆ ಈವರೆಗೆ ಸಿಗುತ್ತಿರುವ ಎಲ್ಲಾ ಸರಕಾರಿ ಸೌಲಭ್ಯಗಳು ಮುಂದೆಯೂ ಯಾವ ತಡೆ ಇಲ್ಲದೆ ಸಿಗಲಿವೆ. ಆದ್ದರಿಂದ ಅಗತ್ಯ ಇರುವ ಕೃಷಿಕರು ಮಾತ್ರ ಕಿಸಾನ್ ಕಾರ್ಡನ್ನು ಮಾಡಿಸಿ ಕೊಳ್ಳಬೇಕು. ತಮ್ಮ ಕೃಷಿ ಅವಶ್ಯಕತೆಗಳಿಗೆೆ ಮಾತ್ರ ಬ್ಯಾಂಕುಗಳಿಂದ ಸಾಲ ಪಡೆಯಬೇಕು ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಜಿಲ್ಲೆಯ ರೈತರನ್ನು ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News