ಉಡುಪಿ ತ್ಯಾಜ್ಯ ನಿರ್ವಹಣೆ ಜಾಗೃತಿಗೆ ಎಚ್‌ಡಿಬಿ ನೆರವು
ಉಡುಪಿ : ನಗರದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಮತ್ತು ನಿರಂತರ ವಾಗಿ ನಿರ್ವಹಿಸಲು ಜಿಲ್ಲಾಡಳಿತ ಪ್ರಾರಂಭಿ ಸಿದ ಸಮಗ್ರ ಕಾರ್ಯಕ್ರಮ ‘ಸ್ವಚ್ಛ ಉಡುಪಿ’ ಉಪಕ್ರಮದಂತೆ ಮೂಲದಲ್ಲೇ ತ್ಯಾಜ್ಯ ವಿಂಗಡಿಸುವ ಬಗ್ಗೆ ಜಾಗೃತಿ ಮೂಡಿಸಲು ಸಾಹಸ್ ಸ್ವಯಂಸೇವಾ ಸಂಸ್ಥೆ ಜತೆಗೆ ಎಚ್‌ಡಿಬಿ ಫೈನಾನ್ಶಿಯಲ್ ಸರ್ವೀಸಸ್ ಕೈಜೋಡಿಸಿದೆ.
ಈ ಯೋಜನೆಯಡಿ ನಿವಾಸಿಗಳು ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಮೂಲದಲ್ಲಿಯೇ ತ್ಯಾಜ್ಯವನ್ನು ಬೇರ್ಪಡಿಸುವ ಕುರಿತು ತರಬೇತಿ ನೀಡಲಾಗಿದೆ. ವಿವಿಧ ಜಾಗೃತಿ ಚಟುವಟಿಕೆಗಳ ಮೂಲಕ ಸುಮಾರು ೧,೫೫,೦೦೦ ವ್ಯಕ್ತಿಗಳು ತರಬೇತಿ ಪಡೆದಿದ್ದು, ೩೪,೦೦೦ಕ್ಕೂ ಅಧಿಕ ಕುಟುಂಬಗಳು ಪ್ರತಿದಿನ ಮೂಲ ದಲ್ಲೇ ತ್ಯಾಜ್ಯ ಪ್ರತ್ಯೇಕಿಸುವುದನ್ನು ಅಭ್ಯಾಸ ಮಾಡುತ್ತಿವೆ ಎಂದು ಉಡುಪಿಯ ಎಚ್‌ಡಿಬಿಎಫ್‌ಎಸ್ ಶಾಖೆಯ ವ್ಯವಸ್ಥಾಪಕ ದಯಾನಂದ ಪೂಜಾರಿ ಮತ್ತು ಉಡುಪಿ ನಗರಪಾಲಿಕೆಯ ಪರಿಸರ ಇಂಜಿನಿಯರ್ ಸ್ನೇಹಾ ಶಂಕರ್ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
ಎಚ್‌ಡಿಬಿಎಫ್‌ಎಸ್ ವಾರ್ಡ್ ಮಟ್ಟದ ಮುಂಚೂಣಿಯ ಕಾರ್ಯಕರ್ತರಿಗೆ ಅಂದರೆ ಕಸ ಸಂಗ್ರಹಣೆಯಲ್ಲಿ ಸಹಾಯ ಮಾಡುವವರು, ವಿಂಗಡಣೆ ಮಾಡುವ ಘಟಕಗಳಲ್ಲಿ ನೇಮಕ ಮಾಡುವವರು ಮತ್ತು ಲ್ಯಾಂಡ್‌ಫಿಲ್‌ಗಳನ್ನು ನಿರ್ವಹಿಸುವ ಸಿಬ್ಬಂದಿಗಳಿಗೂ ತರಬೇತಿ ನೀಡಲು ನೆರವಾಗಿದೆ. ಈವರೆಗೆ ಸುಮಾರು ೧೧,೦೦೦ ಮೆಟ್ರಿಕ್ ಟನ್ ತ್ಯಾಜ್ಯವನ್ನು ತ್ಯಾಜ್ಯ ರಾಶಿಯಿಂದ ವಿಮುಖಗೊಳಿಸಲಾಗಿದೆ. ಜೈವಿಕವಾಗಿ ಕರಗುವ ತ್ಯಾಜ್ಯವನ್ನು ಬಳಸಿ ಕಾಂಪೋಸ್ಟ್ ತಯಾರಿಸಲಾಗುತ್ತದೆ. ಆದರೆ ಕೊಳೆಯದ ತ್ಯಾಜ್ಯವನ್ನು ಅದರ ರಾಸಾಯನಿಕ ಸಂಯೋಜನೆಯನ್ನು ಅವಲಂಬಿಸಿ ಸಹ ಸಂಸ್ಕರಣೆಗೆ ಕಳುಹಿಸಲಾಗುತ್ತದೆ ಎಂದು ಪ್ರಕಟಣೆ ಹೇಳಿದೆ.
ಘನತ್ಯಾಜ್ಯ ನಿರ್ವಹಣೆಯಲ್ಲಿ ಉಡುಪಿ ಯೋಜನೆಯು ನಮ್ಮ ಮೊದಲ ನಗರ ಮಟ್ಟದ ಪ್ರಯೋಗವಾಗಿದೆ. ಉಡುಪಿ ಸಿಎಂಸಿಯ ಬೆಂಬಲದೊಂದಿಗೆ ನಾವು ಇತರ ನಗರಗಳಲ್ಲಿಯೂ ಪುನರಾವರ್ತಿಸಬಹುದಾದ ಮಾದರಿ ಯನ್ನು ಪ್ರದರ್ಶಿಸಿದ್ದೇವೆ ಎಂದು ಸಾಹಸ್ ಸಿಇಒ ಅರ್ಚನಾ ತ್ರಿಪಾಠಿ ತಿಳಿಸಿದ್ದಾರೆ.