ಮಹಾರಾಷ್ಟ್ರದಲ್ಲಿ ಯೋಗಿಗಳಿಲ್ಲ, ಇರುವುದು ಭೋಗಿಗಳು ಮಾತ್ರ: ರಾಜ್ ಠಾಕ್ರೆ

Update: 2022-04-28 16:20 GMT

 ಮುಂಬೈ, ಎ 28: ಧಾರ್ಮಿಕ ಕೇಂದ್ರಗಳಿಂದ ಲೌಡ್ ಸ್ಪೀಕರ್‌ ಗಳನ್ನು ತೆಗೆದು ಹಾಕುವ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರಕಾರದ ನಿರ್ಧಾರವನ್ನು ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ವರಿಷ್ಠ ರಾಜ್ ಠಾಕ್ರೆ ಗುರುವಾರ ಶ್ಲಾಘಿಸಿದ್ದಾರೆ. ಇದರೊಂದಿಗೆ ತನ್ನ ಸೋದರ ಸಂಬಂಧಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ದುರದೃಷ್ಟವಶಾತ್ ರಾಜ್ಯ ಭೋಗಿಗಳನ್ನು ಹೊಂದಿದೆ ಎಂದಿದ್ದಾರೆ.

ಉತ್ತರಪ್ರದೇಶ ಸರಕಾರ ಮಸೀದಿ ಹಾಗೂ ದೇವಾಲಯ ಸೇರಿದಂತೆ ಧಾರ್ಮಿಕ ಕೇಂದ್ರಗಳ ಸುಮಾರು 11 ಸಾವಿರ ಅನಧಿಕೃತ ಲೌಡ್ ಸ್ವೀಕರ್ ಗಳನ್ನು ತೆಗೆಸಿದೆ. ಸರಕಾರದ ಆದೇಶದ ಹಿನ್ನೆಲೆಯಲ್ಲಿ ಇನ್ನೂ 35 ಸಾವಿರ ಲೌಡ್ ಸ್ವೀಕರ್ ಗಳನ್ನು ಅನುಮತಿಸಲಾದ ವಾಲ್ಯೂಮ್ ಮಿತಿಯಲ್ಲಿ ಬಳಸಲು ಅವಕಾಶ ನೀಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಬುಧವಾರ ತಿಳಿಸಿದ್ದಾರೆ.

ಧಾರ್ಮಿಕ ಕೇಂದ್ರಗಳಿಂದ ಅನಧಿಕೃತ ಲೌಡ್ ಸ್ಪೀಕರ್ ಗಳನ್ನು ತೆಗೆಯುವ ಕಾರ್ಯಾಚರಣೆಯನ್ನು ರಾಜ್ಯಾದ್ಯಂತ ನಡೆಸಲಾಗುತ್ತಿದೆ. ಇತರ ಲೌಡ್ ಸ್ವೀಕರ್ ಗಳಿಗೆ ಅನುಮತಿಸಲಾದ ವಾಲ್ಯೂಮ್ ಮಿತಿಯನ್ನು ವಿಧಿಸಲಾಗಿದೆ ಎಂದು ಉತ್ತರಪ್ರದೇಶದ ಹೆಚ್ಚುವರಿ ಡಿಜಿಪಿ (ಕಾನೂನು ಹಾಗೂ ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.

ಗುರುವಾರ ಟ್ವೀಟರ್ ನಲ್ಲಿ ಸಂದೇಶ ರವಾನಿಸಿದ ರಾಜ್ ಠಾಕ್ರೆ, ‘‘ನಾನು ತುಂಬು ಹೃದಯದಿಂದ ಅಭಿನಂದಿಸುತ್ತೇನೆ. ಧಾರ್ಮಿಕ ಕೇಂದ್ರಗಳಿಂದ, ಮುಖ್ಯವಾಗಿ ಮಸೀದಿಗಳಿಂದ ಲೌಡ್ ಸ್ಪೀಕರ್ ಅನ್ನು ತೆಗೆಯುವ ನಿರ್ಧಾರ ತೆಗೆದುಕೊಂಡ ಯೋಗಿ ಸರಕಾರಕ್ಕೆ ಅಭಾರಿಯಾಗಿದ್ದೇನೆ’’ ಎಂದಿದ್ದಾರೆ. ‘‘ದುರಾದೃಷ್ಟವೆಂದರೆ ಮಹಾರಾಷ್ಟ್ರದಲ್ಲಿ ಯಾವುದೇ ಯೋಗಿಗಳು ಇಲ್ಲ; ಇಲ್ಲಿರುವುದು ಭೋಗಿಗಳು ಮಾತ್ರ’’ ಎಂದು ಅವರು ಹೇಳಿದ್ದಾರೆ. ಮಸೀದಿಗಳ ಲೌಡ್ ಸ್ವೀಕರ್ ಗಳನ್ನು ತೆಗೆಯಲು ರಾಜ್ ಠಾಕ್ರೆ ಅವರು ಇತ್ತೀಚೆಗೆ ಮಹಾರಾಷ್ಟ್ರ ಸರಕಾರಕ್ಕೆ ಮೇ 3ರ ವರೆಗೆ ಅಂತಿಮ ಗಡುವು ನೀಡಿದ್ದರು. ಈ ವಿಷಯ ರಾಜ್ಯದಲ್ಲಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News