×
Ad

ಐಪಿಎಲ್: ಡೆಲ್ಲಿ ಕ್ಯಾಪಿಟಲ್ಸ್‌ಗೆ ಗೆಲುವು

Update: 2022-04-28 23:27 IST

   ಮುಂಬೈ, ಎ.28: ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್(42 ರನ್, 26 ಎಸೆತ, 8 ಬೌಂಡರಿ)ಹಾಗೂ ರಾವ್‌ಮನ್ ಪೊವೆಲ್(ಔಟಾಗದೆ 33 ರನ್, 16 ಎಸೆತ, 1 ಬೌಂಡರಿ, 3 ಸಿಕ್ಸರ್)ಸಾಹಸದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೋಲ್ಕತಾ ನೈಟ್ ರೈಡರ್ಸ್ ತಂಡದ ವಿರುದ್ಧ 4 ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿದೆ.

ಗುರುವಾರ ನಡೆದ ಐಪಿಎಲ್‌ನ 41ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೆಕೆಆರ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 146 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಡೆಲ್ಲಿ 19 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿತು.

ಡೆಲ್ಲಿ ಪರ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್(42 ರನ್, 26 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ಅಕ್ಷರ್ ಪಟೇಲ್(24 ರನ್) ಹಾಗೂ ಲಲಿತ್ ಯಾದವ್(22)ಎರಡಂಕೆಯ ಸ್ಕೋರ್ ಗಳಿಸಿದರು. ಕೆಕೆಆರ್ ಪರ ಹಿರಿಯ ವೇಗದ ಬೌಲರ್ ಉಮೇಶ್ ಯಾದವ್(3-24) ಯಶಸ್ವಿ ಬೌಲರ್ ಎನಿಸಿಕೊಂಡರು.

ಇದಕ್ಕೂ ಮೊದಲು ಮಧ್ಯಮ ಕ್ರಮಾಂಕದ ಬ್ಯಾಟರ್ ನಿತಿಶ್ ರಾಣಾ ಅರ್ಧಶತಕ(57 ರನ್, 34 ಎಸೆತ, 3 ಬೌಂಡರಿ, 4 ಸಿಕ್ಸರ್)ಹಾಗೂ ನಾಯಕ ಶ್ರೇಯಸ್ ಅಯ್ಯರ್ ಗಳಿಸಿದ 42 ರನ್(37 ಎಸೆತ, 4 ಬೌಂಡರಿ)ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 146 ರನ್ ಗಳಿಸಿತು.

ಸ್ಪಿನ್ನರ್ ಕುಲದೀಪ್ ಯಾದವ್(4-14) ಸ್ಪಿನ್ ಮೋಡಿಗೆ ತತ್ತರಿಸಿದ ಕೆಕೆಆರ್ ಒಂದು ಹಂತದಲ್ಲಿ 83 ರನ್‌ಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿತು. ವೇಗದ ಬೌಲರ್ ಮುಸ್ತಫಿಝುರ್ರಹ್ಮಾನ್(3-18)ಕೆಳ ಕ್ರಮಾಂಕದ ಬ್ಯಾಟರ್‌ಗಳಿಗೆ ದುಸ್ವಪ್ನರಾದರು. ಚೇತನ್ ಸಕಾರಿಯಾ(1-17) ಹಾಗೂ ಅಕ್ಷರ್ ಪಟೇಲ್(1-28) ತಲಾ ಒಂದು ವಿಕೆಟ್ ಪಡೆದರು.

ಕೆಕೆಆರ್ 7.3ನೇ ಓವರ್‌ನಲ್ಲಿ 35 ರನ್ ಗಳಿಸುವಷ್ಟರಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡಿತು. ಆಗ 5ನೇ ವಿಕೆಟ್‌ಗೆ 48 ರನ್ ಜೊತೆಯಾಟ ನಡೆಸಿದ ರಾಣಾ ಹಾಗೂ ಅಯ್ಯರ್ ತಂಡವನ್ನು ಆಧರಿಸಿದರು. ಅಯ್ಯರ್ ಔಟಾದ ಬಳಿಕ ರಿಂಕು ಸಿಂಗ್(23 ರನ್, 16 ಎಸೆತ, 3 ಬೌಂಡರಿ) ಜೊತೆ ಕೈಜೋಡಿಸಿದ ರಾಣಾ 7ನೇ ವಿಕೆಟ್‌ಗೆ 62 ರನ್ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 145ಕ್ಕೆ ತಲುಪಿಸಿದರು.

ಸಿಂಗ್ ಔಟಾದ ಬೆನ್ನಿಗೆ ಸತತ ಎಸೆತಗಳಲ್ಲಿ ನಿತಿಶ್ ರಾಣಾ ಹಾಗೂ ಟಾಮ್ ಸೌಥಿ ವಿಕೆಟ್ ಒಪ್ಪಿಸಿದರು. ಕೆಕೆಆರ್ ಇನಿಂಗ್ಸ್ ಆರಂಭಿಸಿದ ಆ್ಯರೊನ್ ಫಿಂಚ್(3 ರನ್ ) ಹಾಗೂ ವೆಂಕಟೇಶ್ ಅಯ್ಯರ್(6 ರನ್) ಉತ್ತಮ ಆರಂಭ ಒದಗಿಸಲು ವಿಫಲರಾದರು. ಬಾಬಾ ಅಪರಾಜಿತ್ 6 ರನ್ ಗಳಿಸಿದರೆ, ಸುನೀಲ್ ನರೇನ್(0), ಆ್ಯಂಡ್ರೆ ರಸೆಲ್(0), ಸೌಥಿ(0)ರನ್ ಖಾತೆ ತೆರೆಯುವಲ್ಲಿ ವಿಫಲರಾದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News