ಬನಾರಸ್ ಹಿಂದೂ ವಿವಿಯಲ್ಲಿ ಇಫ್ತಾರ್ ಕೂಟ: ವಿರೋಧ ವ್ಯಕ್ತಪಡಿಸಿದ ವಿದ್ಯಾರ್ಥಿ ಗುಂಪು

Update: 2022-04-29 04:13 GMT

ಲಕ್ನೋ, ಎ.29: ದೇಶದ ಅತ್ಯುನ್ನತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಇಫ್ತಾರ್ ಸಂಬಂಧ ವಿವಾದ ಭುಗಿಲೆದ್ದಿದ್ದು, ಅಹಿತಕರ ಘಟನೆಗಳಿಗೆ ಕಾರಣವಾಗಿದೆ.

ವಿಶ್ವವಿದ್ಯಾನಿಲಯದ ಮಹಿಳಾ ವಿದ್ಯಾಲಯದಲ್ಲಿ ಇಫ್ತಾರ್ ಕೂಟ ಏರ್ಪಡಿಸಲು ವಿದ್ಯಾರ್ಥಿಗಳ ಒಂದು ಗುಂಪು ಆಕ್ಷೇಪಿಸಿದ್ದು ಇದಕ್ಕೆ ಕಾರಣ. ಕೂಟದಲ್ಲಿ ಕುಲಪತಿ ಕೂಡಾ ಹಾಜರಿದ್ದುದನ್ನು ವಿರೋಧಿಸಿ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದರು.

ಮೊಟ್ಟಮೊದಲ ಬಾರಿಗೆ ಇಫ್ತಾರ್ ಕೂಟವನ್ನು ವಿವಿಯಲ್ಲಿ ಆಯೋಜಿಸಲಾಗಿದ್ದು, ಹೊಸ ಸಂಪ್ರದಾಯ ಹುಟ್ಟುಹಾಕುವ ಅಗತ್ಯತೆಯನ್ನು ಕೆಲವು ವಿದ್ಯಾರ್ಥಿಗಳು ಪ್ರಶ್ನಿಸಿದರು. ಇದು ಕುಲಪತಿಯ ಓಲೈಕೆ ರಾಜಕಾರಣ ಎಂದು ಆಪಾದಿಸಿದ ಒಂದು ಗುಂಪು ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಅವರ ಪ್ರತಿಕೃತಿ ದಹಿಸಿತು.

ವಿಶ್ವವಿದ್ಯಾನಿಲಯ ಇದನ್ನು ಖಂಡಿಸಿದ್ದು, "ಶೈಕ್ಷಣಿಕ ವಾತಾವರಣ ಮತ್ತು ಶಾಂತಿಯನ್ನು ಹದಡುವ ಪ್ರಯತ್ನ ಇದಾಗಿದೆ" ಎಂದು ಟೀಕಿಸಿದೆ. ಸಂಜೆ ಉಪವಾಸ ಅಂತ್ಯಗೊಳಿಸುವ ಸಂದರ್ಭ ಇಫ್ತಾರ್ ಕೂಟವನ್ನು ಆಯೋಜಿಸುವುದು ಇಲ್ಲಿನ ಸಂಪ್ರದಾಯ ಎಂದು ಸ್ಪಷ್ಟಪಡಿಸಿದೆ.

"ಎರಡು ಅಂಶಗಳ ಬಗ್ಗೆ ಯಾವುದೇ ಗೊಂದಲ ಅಥವಾ ತಪ್ಪು ಮಾಹಿತಿ ಬೇಡ. ಕುಲಪತಿ ಪ್ರೊ.ಸುಧೀರ್ ಕೆ. ಜೈನ್ ಇಫ್ತಾರ್ ಕೂಟ ಏರ್ಪಡಿಸಿಲ್ಲ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅವರನ್ನು ಆಹ್ವಾನಿಸಿದ್ದು, ಮುಖ್ಯಸ್ಥರಾಗಿ ಅವರು ಇದರಲ್ಲಿ ಭಾಗವಹಿಸಿದ್ದರು. ಎರಡನೆಯದಾಗಿ ಇಫ್ತಾರ್ ಆಯೋಜಿಸುವ ಸಂಪ್ರದಾಯ ಇಲ್ಲಿ ಎರಡು ದಶಕದಷ್ಟು ಹಳೆಯದು" ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಚಂದ್ರಶೇಖರ್ ಗ್ರೇವಲ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News