ಮುಸ್ಲಿಮರ ವಿರುದ್ಧ ದ್ವೇಷಪೂರಿತ ಭಾಷಣ ಮಾಡಿದ ಆರೋಪ: ಕೇರಳದ ಜನಪಕ್ಷಂ ನಾಯಕ ಪಿ.ಸಿ. ಜಾರ್ಜ್ ಬಂಧನ
ತಿರುವನಂತಪುರ: ಅನಂತಪುರಿ ಹಿಂದೂ ಸಮ್ಮೇಳನದಲ್ಲಿ ಶುಕ್ರವಾರ ದ್ವೇಷಪೂರಿತ ಭಾಷಣ ಮಾಡಿದ ಆರೋಪದ ಮೇಲೆ ಕೇರಳದ ಜನಪಕ್ಷಂ ನಾಯಕ ಹಾಗೂ ಮಾಜಿ ಶಾಸಕ ಪಿ.ಸಿ. ಜಾರ್ಜ್ ಅವರನ್ನು ಎರಟ್ಟುಪೆಟ್ಟದಲ್ಲಿರುವ ಅವರ ನಿವಾಸದಿಂದ ಕೋಟೆ ಪೊಲೀಸರು ರವಿವಾರ ಬೆಳಗ್ಗೆ ವಶಕ್ಕೆ ಪಡೆದಿದ್ದಾರೆ ಎಂದು New Indian express ವರದಿ ಮಾಡಿದೆ.
ಜಾರ್ಜ್ ಅವರ ವಿರುದ್ಧ ಜಾಮೀನು ರಹಿತ ಐಪಿಸಿ ಸೆಕ್ಷನ್ 153 ಎ ಅಡಿಯಲ್ಲಿ ಪ್ರಕರಣ ದಾಖಲಿಸಿದ ನಂತರ ಪೊಲೀಸರು ಜಾರ್ಜ್ ಅವರನ್ನು ಬೆಳಿಗ್ಗೆ 5 ಗಂಟೆಗೆ ಕಸ್ಟಡಿಗೆ ತೆಗೆದುಕೊಂಡರು.
ಈ ಜಾಮೀನು ರಹಿತ ಅಪರಾಧಕ್ಕೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ನಿಗದಿಪಡಿಸಲಾಗಿದೆ. ಜಾರ್ಜ್‌ಗೆ ಎರಡು ಪೊಲೀಸ್ ಜೀಪ್‌ಗಳೊಂದಿಗೆ ತಿರುವನಂತಪುರಕ್ಕೆ ಪ್ರಯಾಣಿಸಲು ಸ್ವಂತ ವಾಹನವನ್ನು ಬಳಸಲು ಅನುಮತಿಸಲಾಯಿತು.
ಜಾರ್ಜ್ ವಿರುದ್ಧ 20ಕ್ಕೂ ಹೆಚ್ಚು ದೂರುಗಳು ಬಂದಿದ್ದು, ಅವರ ಭಾಷಣವು ಕೋಮುವಾದವನ್ನು ಹುಟ್ಟುಹಾಕುವ ಮತ್ತು ನಿರ್ದಿಷ್ಟ ಧರ್ಮದ ಅನುಯಾಯಿಗಳ ವಿರುದ್ಧ ದ್ವೇಷವನ್ನು ಹರಡುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿರುವ ಡಿಜಿಪಿ ಅನಿಲ್ ಕಾಂತ್ ಅವರು ಎಫ್‌ಐಆರ್ ದಾಖಲಿಸಲು ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.