ಮತ್ತೆ ಕುತೂಹಲ ಹುಟ್ಟಿಸಿದ ಪ್ರಶಾಂತ್ ಕಿಶೋರ್ ನಡೆ

Update: 2022-05-02 06:16 GMT
ಪ್ರಶಾಂತ್ ಕಿಶೋರ್ (PTI)

ಹೊಸದಿಲ್ಲಿ: ಕಾಂಗ್ರೆಸ್ ಪಕ್ಷದ ಜೊತೆಗೆ ಮಾತುಕತೆಗಳು ಮುರಿದ ಕೆಲವೇ ದಿನಗಳ ನಂತರ ಇಂದು ಟ್ವೀಟ್ ಮಾಡಿರುವ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ತಮ್ಮ ಮುಂದಿನ ನಡೆಯ ಬಗ್ಗೆ ಭಾರೀ ಕುತೂಹಲ ಮೂಡಿಸಿದ್ದಾರೆ.

"ಪ್ರಜಾಪ್ರಭುತ್ವದಲ್ಲಿ ಅರ್ಥಪೂರ್ಣ ಭಾಗೀದಾರನಾಗುವ ನಿಟ್ಟಿನಲ್ಲಿ ನನ್ನ ಅನ್ವೇಷಣೆ ಹಾಗೂ ಜನಪರ ನೀತಿಯನ್ನು ರೂಪಿಸಲು ಸಹಾಯ ಮಾಡುವ ನನ್ನ ಗುರಿ 10 ವರ್ಷಗಳ ಏಳುಬೀಳುಗಳ ಹಾದಿಗೆ ಕಾರಣವಾಯಿತು. ಈಗ ನಾನು ಮತ್ತೆ ಪುಟ ತಿರುವುತ್ತಿರುವಾಗ ನಿಜವಾದ ಮಾಸ್ಟರ್ಸ್ (ರಿಯಲ್ ಮಾಸ್ಟರ್ಸ್)ಬಳಿಗೆ ಹೋಗುವ ಸಮಯ ಬಂದಿದೆ, ಜನರು, ಇದು  ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಹಾಗೂ ಜನಪರ ಉತ್ತಮ ಆಡಳಿತದ ಹಾದಿಗೆ ಅನುಕೂಲ ಕಲ್ಪಿಸುತ್ತದೆ,'' ಎಂದು ಅವರು ಟ್ವೀಟ್ ಮಾಡಿದ್ದಾರೆ.

ಪ್ರಶಾಂತ್ ಕಿಶೋರ್ ತಮ್ಮ ತವರು ರಾಜ್ಯ ಬಿಹಾರದತ್ತ ಮತ್ತೆ ಸಾಗಲಿದ್ದಾರೆಯೇ ಎಂಬ ಕುತೂಹಲವನ್ನು ಅವರ ಟ್ವೀಟ್ ಮೂಡಿಸಿದೆ. ನಾಲ್ಕು ವರ್ಷಗಳ ಹಿಂದೆ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿ(ಯು) ಸೇರಿಕೊಂಡಿದ್ದರೂ 16 ತಿಂಗಳುಗಳಲ್ಲಿಯೇ ಹೊರನಡೆದಿದ್ದರು.

ಅದೇ ಸಮಯ ಅವರು ಹೊಸ ರಾಜಕೀಯ ಪಕ್ಷ ಸ್ಥಾಪಿಸಲಿದ್ದಾರೆಯೇ ಅಥವಾ ಬೇರೆ ವಿಪಕ್ಷವನ್ನು ಸೇರಲಿದ್ದಾರೆಯೇ ಎಂಬ ಕುತೂಹಲವೂ ಮೂಡಿದೆ.

ಆದರೆ ಈ ಹಂತದಲ್ಲಿ ಅವರು ಹೊಸ ಪಕ್ಷವನ್ನು ಸೇರಿದರೆ ಮತ್ತೆ ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷ ಸೇರುವುದು ಸಾಧ್ಯವಾಗುವುದಿಲ್ಲ. ಕನಿಷ್ಠ ಆರು ತಿಂಗಳು ಅಥವಾ ಒಂದು ವರ್ಷದೊಳಗೆ ಪ್ರಶಾಂತ್ ಕಿಶೋರ್ ತಮ್ಮ ಮುಂದಿನ ನಿರ್ಧಾರ ಘೋಷಿಸಬಹುದು ಎಂದು ಕಾಂಗ್ರೆಸ್ ಹೇಳಿದೆಯೆನ್ನಲಾಗಿದೆ.

2014 ಲೋಕಸಭಾ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅಭಿಯಾನದ ಜತೆಗೆ ಕೈಜೋಡಿಸಿದ್ದ ಪ್ರಶಾಂತ್ ಕಿಶೋರ್, 2015ರಲ್ಲಿ ಬಿಜೆಪಿಯನ್ನು ಬಿಹಾರದಲ್ಲಿ  ಸೋಲಿಸಲು ಹಾಗೂ ಅಲ್ಲಿ ಲಾಲು ಯಾದವ್, ನಿತೀಶ್ ಕುಮಾರ್ ಪಕ್ಷಗಳ ನಡುವಿನ ಮೈತ್ರಿಗೆ ಕಾರಣರಾಗಿದ್ದರು. 2017ರಲ್ಲಿ ಪಂಜಾಬ್ ಚುನಾವಣೆಯನ್ನು ಅಮರೀಂದರ್ ಸಿಂಗ್ ನೇತೃತ್ವದಲ್ಲಿ ಗೆಲ್ಲಲು ಸಹಾಯ ಮಾಡಿದ್ದ ಅವರು 2019ರಲ್ಲಿ ಆಂಧ್ರ ಮುಖ್ಯಮಂತ್ರಿ ವೈ ಎಸ್ ಜಗನ್‍ಮೋಹನ್ ರೆಡ್ಡಿ, 2020ರಲ್ಲಿ  ದಿಲ್ಲಿಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಸರಕಾರ, 2021ರಲ್ಲಿ ತಮಿಳುನಾಡಿನಲ್ಲಿ ಸ್ಟಾಲಿನ್ ನೇತೃತ್ವದ ಡಿಎಂಕೆ ಹಾಗೂ ಅದೇ ವರ್ಷ ಪ. ಬಂಗಾಳದಲ್ಲಿ  ಮಮತಾ ಬ್ಯಾನರ್ಜಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News