×
Ad

56 ಇಂಚಿನ ಹೇಡಿತನ:ತನ್ನ ಬಂಧನಕ್ಕಾಗಿ ಪ್ರಧಾನಿಗೆ ಕುಟುಕಿದ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ‌

Update: 2022-05-02 13:45 IST

ಹೊಸದಿಲ್ಲಿ,ಮೇ 2: ಗುಜರಾತ ಶಾಸಕ ಜಿಗ್ನೇಶ್ ಮೇವಾನಿ ಅವರು ತನ್ನನ್ನು ಬಂಧಿಸಿದ್ದಕ್ಕಾಗಿ ಸೋಮವಾರ ಅಸ್ಸಾಂ ಸರಕಾರ ಮತ್ತು ಪೊಲೀಸರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಈ ವರ್ಷದ ಉತ್ತರಾರ್ಧದಲ್ಲಿ ನಡೆಯಲಿರುವ ಗುಜರಾತ ವಿಧಾನಸಭಾ ಚುನಾವಣೆಗಳಿಗೆ ಮುನ್ನ ತನ್ನ ವರ್ಚಸ್ಸಿಗೆ ಹಾನಿಯನ್ನುಂಟು ಮಾಡಲು ಷಡ್ಯಂತ್ರಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧವೂ ಅವರು ಟೀಕಾಪ್ರಹಾರ ನಡೆಸಿದರು.

ಸುಳ್ಳು ಪ್ರಕರಣದಲ್ಲಿ ತನ್ನನ್ನು ಸಿಲುಕಿಸಲು ಮಹಿಳೆಯನ್ನು ಬಳಸಿಕೊಂಡಿದ್ದು ‘56 ಇಂಚಿನ ಹೇಡಿತನದ ಕೃತ್ಯ’ವಾಗಿದೆ ಎಂದು ದಿಲ್ಲಿಯ ಕಾಂಗ್ರೆಸ್ ಕೇಂದ್ರಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮೋದಿಯವರನ್ನು ಗುರಿಯಾಗಿಸಿಕೊಂಡು ಹೇಳಿದ ಅವರು,ತನ್ನ ವಿರುದ್ಧದ ಷಡ್ಯಂತ್ರದಲ್ಲಿ ಪ್ರಧಾನಿ ಕಚೇರಿಯು ಭಾಗಿಯಾಗಿತ್ತು ಎಂದು ಆರೋಪಿಸಿದರು. ‌

22 ಪ್ರಶ್ನೆಪತ್ರಿಕೆಗಳ ಸೋರಿಕೆ,ಮುಂದ್ರಾ ಬಂದರಿನಲ್ಲಿ ಇತ್ತೀಚಿಗೆ 1.75 ಲ.ಕೋ.ರೂ.ಮೌಲ್ಯದ ಮಾದಕ ದ್ರವ್ಯ ವಶಪಡಿಸಿಕೊಂಡಿರುವುದು ಸೇರಿದಂತೆ ಹಲವಾರು ವಿಷಯಗಳಲ್ಲಿ ಕ್ರಮಕ್ಕೆ ಮತ್ತು ಉನಾದಲ್ಲಿ ದಲಿತರ ಹಾಗೂ ರಾಜ್ಯದಲ್ಲಿ ಅಲ್ಪಸಂಖ್ಯಾತರ ವಿರುದ್ಧದ ಪ್ರಕರಣಗಳನ್ನು ಹಿಂದೆಗೆದುಕೊಳ್ಳುವಂತೆ ಆಗ್ರಹಿಸಲು ಜೂ.1ರಂದು ಗುಜರಾತ ಬಂದ್ ನಡೆಸಲಾಗುವುದು ಎಂದು ಮೇವಾನಿ ಪ್ರಕಟಿಸಿದರು.

ತನಗೆ ಜಾಮೀನು ಮಂಜೂರು ಮಾಡಿದ ನ್ಯಾಯಾಲಯದ ತೀಕ್ಷ್ಣ ಹೇಳಿಕೆಗಳಿಗೆ ಅಸ್ಸಾಮಿನ ಹಿಮಂತ ಬಿಸ್ವ ಶರ್ಮಾ ಸರಕಾರವು ನಾಚಿಕೆ ಪಟ್ಟುಕೊಳ್ಳಬೇಕು ಎಂದ ಅವರು, ‘ಎ.19ರಂದು ನನ್ನ ವಿರುದ್ಧ ಎಫ್ಐಆರ್ ದಾಖಲಾಗಿತ್ತು ಮತ್ತು ಅದೇ ದಿನ ನನ್ನನ್ನು ಬಂಧಿಸಲು ಅಸ್ಸಾಂ ಪೊಲೀಸರು 2500 ಕಿ.ಮೀ.ಗೂ ಅಧಿಕ ದೂರವನ್ನು ಪ್ರಯಾಣಿಸಿದ್ದರು. ಇದು ನನ್ನನ್ನು ನಾಶಗೊಳಿಸಲು ಪೂರ್ವಯೋಜಿತ ಸಂಚು ಆಗಿತ್ತು ’ ಎಂದು ಕಿಡಿಕಾರಿದರು.

ಮೋದಿಯವರನ್ನು ಟೀಕಿಸಿದ್ದ ಟ್ವೀಟ್ಗಳಿಗಾಗಿ ಪಕ್ಷೇತರ ಶಾಸಕ ಮೇವಾನಿಯವರನ್ನು ಕಳೆದ ತಿಂಗಳು ಅಸ್ಸಾಂ ಪೊಲೀಸರ ತಂಡವು ಗುಜರಾತಿನ ಪಾಲನಪುರದಿಂದ ಬಂಧಿಸಿತ್ತು. ಅಸ್ಸಾಮಿನ ಬಿಜೆಪಿ ನಾಯಕರೋರ್ವರು ಮೇವಾನಿ ವಿರುದ್ಧ ದೂರು ದಾಖಲಿಸಿದ್ದರು.
ಎ.25ರಂದು ಅವರಿಗೆ ಜಾಮೀನು ಮಂಜೂರಾಗಿತ್ತಾದರೂ ಮಹಿಳಾ ಪೊಲೀಸ್ ಓರ್ವರು ದಾಖಲಿಸಿದ್ದ ಹಲ್ಲೆ ಪ್ರಕರಣದಲ್ಲಿ ಮತ್ತೆ ಬಂಧಿಸಲಾಗಿತ್ತು. ಈ ಪ್ರಕರಣವನ್ನು ‘ಕಟ್ಟುಕಥೆ’ಎಂದು ನ್ಯಾಯಾಲಯವು ಬಣ್ಣಿಸಿತ್ತು.

ಅಸ್ಸಾಮಿನ ಬಾರ್ಪೇಟಾ ಜಿಲ್ಲಾ ನ್ಯಾಯಾಲಯವು ಶುಕ್ರವಾರ ಜಾಮೀನು ನೀಡಿದ ಬಳಿಕ ಅಂತಿಮವಾಗಿ ಶನಿವಾರ ಮೇವಾನಿಯವರನ್ನು ಬಿಡುಗಡೆಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News