ಬೈಂದೂರು; ಕಾರು ಅಪಘಾತ: ಕಾರವಾರ ಜಿಪಂ ಮಾಜಿ ಸದಸ್ಯ ಗಂಭೀರ

Update: 2022-05-02 15:40 GMT

ಬೈಂದೂರು : ಕಾರು ಡಿವೈಡರ್‌ಗೆ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಕಾರವಾರ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರತ್ನಾಕರ ನಾಯ್ಕ್ ಗಂಭೀರ ಗಾಯಗೊಂಡ ಘಟನೆ ನಾಗೂರು ಶ್ರೀವೀರಾಂಜನೇಯ ದೇವಸ್ಥಾನದ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ನಡೆದಿದೆ.

ದೇವಸ್ಥಾನದ ಎದುರುಗಡೆಯ ಡಿವೈಡರ್‌ಗೆ ಢಿಕ್ಕಿ ಹೊಡೆದ ಕಾರು, ವಿದ್ಯುತ್ ಕಂಬಕ್ಕೆ ರಭಸವಾಗಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದ್ದು, ರತ್ನಾಕರ್ ನಾಯ್ಕ್ ಅವರ ಕೈ ಬೆರಳುಗಳು ತುಂಡಾಗಿ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಗಾಯಗೊಂಡವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಮತ್ತೊಬ್ಬರಿಗೂ ಗಾಯವಾಗಿದೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಬೈಂದೂರು ಠಾಣೆ ಪಿಎಸ್‌ಐ ಪವನ್ ನಾಯಕ್ ಹಾಗೂ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ವಿಕಲಚೇತನ ವ್ಯಕ್ತಿಯ ಮಾನವೀಯತೆ

ವಿಕಲಚೇತನರಾಗಿರುವ ಜಮಾಅತ್ ಮಾಜಿ ಅಧ್ಯಕ್ಷ  ಉಬೈದುಲ್ಲಾ ಎಂ.ಎಚ್. ರಸ್ತೆಯಲ್ಲಿ ಹಾದು ಹೋಗುತ್ತಿದ್ದ ಆಂಬ್ಯುಲೆನ್ಸ್ ನಿಲ್ಲಿಸಿ ಗಾಯಾಳುಗಳನ್ನು ಪ್ರಥಮ ಚಿಕಿತ್ಸೆಗಾಗಿ ಕುಂದಾಪುರ ಖಾಸಗಿ ಆಸ್ಪತ್ರೆಗೆ ಸ್ವತಃ ತಾನು ಜೊತೆಯಾಗಿ ಕರೆದುಕೊಂಡು ಹೋಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ನಾಗೂರು ನಿವಾಸಿ ನತರ್ ಗಂಗೊಳ್ಳಿ, ಇಬ್ರಾಹಿಂ ಗಂಗೊಳ್ಳಿ ಹಾಗೂ ಕೃಷ್ಣ ಇವರ ಆಂಬ್ಯುಲೆನ್ಸ್‌ನಲ್ಲಿ ಕುಂದಾಪುರ ಆಸ್ಪತ್ರೆವರೆಗೆ ಸಾಗಿಸಲು ಸಹಕರಿಸಿದರು. ಘಟನೆ ನಡೆದ ಸ್ಥಳದಿಂದ ಒಂದು ಕಿಲೋಮೀಟರ್ ದೂರಕ್ಕೆ ಟ್ರಾಫಿಕ್ ಜಾಮ್ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News