ಪಿಎಸ್ಸೈ ನೇಮಕಾತಿ ಹಗರಣದ ತನಿಖೆ ಹಳ್ಳ ಹಿಡಿಯದಿರಲಿ

Update: 2022-05-02 18:31 GMT

ಮಾನ್ಯರೇ,

ಪಿಎಸ್ಸೈ ಅಕ್ರಮ ನೇಮಕಾತಿ ಕುರಿತಂತೆ ಶಾಸಕ ಪ್ರಿಯಾಂಕ್ ಖರ್ಗೆಯವರು ಎತ್ತಿರುವ ಪ್ರಶ್ನೆಗಳು ಸರಳವೂ, ಸಮಂಜಸವೂ ಆಗಿವೆ. ಹಾಗೆಯೇ, ಈ ಕುರಿತು ಸರಣಿ ಪತ್ರಿಕಾ ಗೋಷ್ಠಿ ನಡೆಸಿ ಕಳೆದ ಶನಿವಾರ ಅಕ್ರಮದ ಕುರಿತಂತೆ ಇಬ್ಬರು ವ್ಯಕ್ತಿಗಳ ನಡುವೆ ನಡೆದಿದೆಯೆನ್ನಲಾದ ಆಡಿಯೊ ಒಂದನ್ನು ಬಿಡುಗಡೆ ಮಾಡಿರುವ ಅವರಿಗೆ, ಅವರಲ್ಲಿರುವ ದಾಖಲೆ ಮತ್ತು ಮಾಹಿತಿಯೊಡನೆ ಹಾಜರಾಗುವಂತೆ ಸಿಐಡಿ ಪೊಲೀಸರು ನೋಟಿಸ್ ನೀಡಿರುವುದೂ ತನಿಖಾ ವಿಧಾನದಲ್ಲಿ ಅಷ್ಚೇ ಸರಳ ಮತ್ತು ಸಹಜ ಪ್ರಕ್ರಿಯೆ. ಈ ಹಗರಣದಲ್ಲಿ ಆಡಳಿತ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಸೇರಿದವರು ಭಾಗಿಯಾಗಿದ್ದಾರೆನ್ನಲಾಗಿರುವ ಕೆಲವರನ್ನು ಬಂಧಿಸಲಾಗಿದ್ದು, ಕೆಲವರು ತಲೆಮರೆಸಿಕೊಂಡಿದ್ದಾರೆ; ಇತ್ತೀಚಿನ ಸುದ್ದಿಯಂತೆ ನೇಮಕಾತಿ ವಿಭಾಗದ ಎಡಿಜಿಪಿಯ ವರ್ಗಾಣೆಯೂ ಆಗಿದೆ.
ತನಿಖೆ ಹಳ್ಳ ಹಿಡಿಯದೆ, ಸರಿಯಾದ ದಿಕ್ಕಿನಲ್ಲಿ ಸುಗಮವಾಗಿ ಸಾಗಿ, ತ್ವರಿತವಾಗಿ ತಾರ್ಕಿಕ ಅಂತ್ಯ ಕಂಡು, ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ಮತ್ತು ಅಕ್ರಮದಲ್ಲಿ ಭಾಗಿಯಾಗಿರುವವರಿಗೆ ಶಿಕ್ಷೆಯಾಗುವಂತಾಗಲು, ಈ ಹಗರಣದ ಬಗ್ಗೆ ದಾಖಲೆ ಮತ್ತು ಮಾಹಿತಿ ಇರುವವರೆಲ್ಲರೂ ತನಿಖಾ ಸಂಸ್ಥೆಯೊಂದಿಗೆ ಅವನ್ನು ಹಂಚಿಕೊಳ್ಳುವುದೊಳಿತು. ಅದರಲ್ಲಿಯೂ ಪ್ರಮುಖ ವಿರೋಧ ಪಕ್ಷದ ಜವಾಬ್ದಾರಿ ತುಸು ಹೆಚ್ಚೇ. ಆದುದರಿಂದ, ಶಾಸಕರು ಪತ್ರಿಕಾಗೋಷ್ಠಿಗಳನ್ನು ನಡೆಸುವ ಮತ್ತು ಆ ಮೂಲಕ ರಾಜಕೀಯ ಸ್ಕೋರುಗಳನ್ನು ಹೆಚ್ಚಿಸಿಕೊಳ್ಳುವಲ್ಲಿ ತೋರುವಷ್ಟೇ ಉತ್ಸುಕತೆಯನ್ನು, ತನಿಖಾ ಸಂಸ್ಥೆಯೊಂದಿಗೆ ಸಹಕರಿಸುವುದರಲ್ಲೂ ತೋರಿಸುವ, ಯಾವುದೇ ಸಬೂಬುಗಳನ್ನು ಮುಂದೊಡ್ಡದಿರುವ ಅವಶ್ಯಕತೆಯಿದೆ; ಶಾಸಕರಾಗಿ ಅದು ಅವರ ಜವಾಬ್ದಾರಿ ಕೂಡ. ಅಂತಹ ಅವರ ನಡೆಯನ್ನು ಸಾರ್ವಜನಿಕರು ಸ್ವಾಗತಿಸುತ್ತಾರೆ.
 

Writer - ಪುಟ್ಟೇಗೌಡ, ಬೆಂಗಳೂರು

contributor

Editor - ಪುಟ್ಟೇಗೌಡ, ಬೆಂಗಳೂರು

contributor

Similar News