ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ; ಕಳೆದ ಬಾರಿಗಿಂತ ಎಂಟು ಸ್ಥಾನ ಕುಸಿದ ಭಾರತ
ಹೊಸದಿಲ್ಲಿ : ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ ಕಳೆದ ಬಾರಿಗಿಂತ ಎಂಟು ಸ್ಥಾನದಷ್ಟು ಕುಸಿತ ಕಂಡಿದ್ದು, 180 ದೇಶಗಳ ಪೈಕಿ ಪತ್ರಿಕಾ ಸ್ವಾತಂತ್ರ್ಯದಲ್ಲಿ ಭಾರತ 150ನೇ ಸ್ಥಾನದಲ್ಲಿದೆ ಎಂದು ಜಾಗತಿಕ ಮಾಧ್ಯಮ ಕಣ್ಗಾವಲು ಸಂಸ್ಥೆ ಮಂಗಳವಾರ ಬಿಡುಗಡೆ ಮಾಡಿದ ವರದಿಯಿಂದ ತಿಳಿದು ಬಂದಿದೆ.
ಭಾರತದ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ (157), ಶ್ರೀಲಂಕಾ (146), ಬಾಂಗ್ಲಾದೇಶ (162) ಮತ್ತು ಮ್ಯಾನ್ಮಾರ್ (176) ಭಾರತಕ್ಕಿಂತಲೂ ಕೆಳಗಿವೆ.
ಆರ್‌ಎಸ್‍ಎಫ್ 2022 ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ನೇಪಾಳ 30 ಸ್ಥಾನ ಮೇಲೇರಿ, 76ನೇ ಸ್ಥಾನಕ್ಕೆ ನೆಗೆದಿದೆ. ಕಳೆದ ವರ್ಷ ಈ ಹಿಮಾಲಯನ್ ದೇಶ 106ನೇ ಸ್ಥಾನದಲ್ಲಿತ್ತು. ಕಳೆದ ಬಾರಿಗಿಂತ ಪಾಕಿಸ್ತಾನ (145), ಶ್ರೀಲಂಕಾ (127), ಬಾಂಗ್ಲಾದೇಶ (152) ಮತ್ತು ಮ್ಯಾನ್ಮಾರ್ (140) ಹೀಗೆ ಎಲ್ಲ ದೇಶಗಳ ರ್ಯಾಂಕಿಂಗ್ ಕುಸಿದಿದೆ.
ಈ ವರ್ಷ ನಾರ್ವೆ, ಡೆನ್ಮಾರ್ಕ್, ಸ್ವೀಡನ್, ಎಸ್ಟೋನಿಯಾ ಮತ್ತು ಫಿನ್ಲೆಂಡ್ ಕ್ರಮವಾಗಿ ಮೊದಲ ಐದು ಸ್ಥಾನಗಳಲ್ಲಿವೆ. ಉತ್ತರ ಕೊರಿಯಾ ರ್ಯಾಂಕಿಂಗ್ ಪಟ್ಟಿಯಲ್ಲಿ ಕಟ್ಟಕಡೆಯ ಅಂದರೆ 180ನೇ ಸ್ಥಾನದಲ್ಲಿದೆ. ರಿಪೋರ್ಟರ್ಸ್ ವಿದೌಟ್ ಬಾರ್ಡರ್ ಸಂಸ್ಥೆ ಈ ಸೂಚ್ಯಂಕ ಬಿಡುಗಡೆ ಮಾಡುತ್ತದೆ.
ಕಳೆದ ವರ್ಷ 150ನೇ ಸ್ಥಾನದಲ್ಲಿದ್ದ ರಷ್ಯಾ 157ನೇ ಸ್ಥಾನಕ್ಕೆ ಕುಸಿದಿದೆ. ಚೀನಾ ಎರಡು ಹಂತ ಮೇಲೇರಿ, 175ನೇ ಸ್ಥಾನದಲ್ಲಿದೆ.
"ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದಂದು ರಿಪೋರ್ಟರ್ಸ್ ವಿದೌಟ್ ಬಾರ್ಡರ್ ಮತ್ತು ಒಂಬತ್ತು ಇತರ ಮಾನವಹಕ್ಕು ಸಂಸ್ಥೆಗಳು, ಪತ್ರಕರ್ತರನ್ನು ಗುರಿ ಮಾಡುವುದನ್ನು ನಿಲ್ಲಿಸುವಂತೆ ಭಾರತ ಸರ್ಕಾರವನ್ನು ಆಗ್ರಹಿಸಿವೆ" ಎಂದು ಈ ಅಂತರರಾಷ್ಟ್ರೀಯ ಎನ್‍ಜಿಓ ತನ್ನ ವೆಬ್‍ಸೈಟ್‍ನಲ್ಲಿ ಹೇಳಿದೆ.