ʼಚೀನಾ ರಾಯಭಾರಿಯೊಂದಿಗೆ ಪಬ್‌ನಲ್ಲಿದ್ದ ರಾಹುಲ್‌ ಗಾಂಧಿʼ ಎಂಬ ವೀಡಿಯೊ ವೈರಲ್ ಮಾಡಿದ ಬಲಪಂಥೀಯರು: ವಾಸ್ತವವೇನು?

Update: 2022-05-04 07:48 GMT

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಕಾಠ್ಮಂಡುವಿನ ನೈಟ್ ಕ್ಲಬ್ ನಲ್ಲಿದ್ದರೆನ್ನಲಾದ ವೀಡಿಯೋವೊಂದನ್ನು ಬಿಜೆಪಿ ಪೋಸ್ಟ್ ಮಾಡಿದ  ನಂತರ ಅದು ವೈರಲ್ ಆಗುವ ಜತೆಗೆ ವಿವಾದಕ್ಕೂ ಈಡಾದ ಬೆನ್ನಲ್ಲೇ ಹಲವಾರು ವದಂತಿಗಳೂ ಹರಿದಾಡುತ್ತಿದೆ.  ರಾಹುಲ್ ಅವರು ನೇಪಾಳದ ಕಾಠ್ಮಂಡುವಿನಲ್ಲಿ ನೇಪಾಳದ ಚೀನೀ ರಾಯಭಾರಿ ಹೌ ಯಾಂಖಿ ಅವರ ಜತೆಗೆ ಪಬ್‍ನಲ್ಲಿದ್ದರು ಎಂದೂ ಕೆಲವರು ಹೇಳಲಾರಂಭಿಸಿದ್ದು ವಾಸ್ತವವಾಗಿ ಇವುಗಳು ಆಧಾರರಹಿತವಾಗಿದೆ ಎಂದು indiatoday ಸತ್ಯಶೋಧನಾ ವರದಿಯಲ್ಲಿ ತಿಳಿಸಿದೆ.

ವಾಸ್ತವವಾಗಿ ರಾಹುಲ್ ಗಾಂಧಿ ಅವರ ಜತೆಗಿರುವ ಯುವತಿ ಅವರು ಭಾಗವಹಿಸಿದ್ದ ವಿವಾಹ ಸಮಾರಂಭದ ವಧುವಿನ ಸ್ನೇಹಿತೆ ಎಂದು ತಿಳಿದು ಬಂದಿದ್ದು ಆಕೆ ಚೀನಾ ರಾಜತಾಂತ್ರಿಕ ಅಧಿಕಾರಿಯಲ್ಲ ಎಂಬುದೂ ದೃಢಪಟ್ಟಿದೆ.

ವರದಿಗಳ ಪ್ರಕಾರ ರಾಹುಲ್ ಅವರು ತಮ್ಮ ಸ್ನೇಹಿತೆ ಹಾಗೂ ಸಿಎನ್‍ಎನ್ ಇಂಟರ್‍ನ್ಯಾಷನಲ್‍ನ ದಿಲ್ಲಿ  ವರದಿಗಾರ್ತಿ ಸುಮ್ನಿಮಾ ಉದಾಸ್ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಕಾಠ್ಮಂಡುವಿಗೆ ತೆರಳಿದ್ದರು. ಸುಮ್ನಿಮಾ ಅವರು  ಮ್ಯಾನ್ಮಾರ್ ನ ಮಾಜಿ ನೇಪಾಳಿ ರಾಯಭಾರಿ ಭೀಮ್ ಉದಾಸ್ ಅವರ ಪುತ್ರಿಯಾಗಿದ್ದಾರೆ.

ಕಠ್ಮಂಡು ಪೋಸ್ಟ್ ವರದಿ ಪ್ರಕಾರ ಸುಮ್ನಿಮಾ ಅವರ ವಿವಾಹವು ಮೇ 3ರಂದು ನಿಮಾ ಮಾರ್ಟಿನ್ ಶೆರ್ಪಾ ಅವರ ಜತೆಗೆ ನೆರವೇರಿತ್ತು ಹಾಗೂ ಔತಣಕೂಟ ಮೇ 5ರಂದು ನಡೆಯಲಿದೆ.

ವಿವಾದಾತ್ಮಕ ವೀಡಿಯೋ ಕಾಠ್ಮಂಡುವಿನ ಜನಪ್ರಿಯ ಪಬ್ ಲಾರ್ಡ್ ಆಫ್ ದಿ ಡ್ರಿಂಕ್ಸ್ ನದ್ದಾಗಿತ್ತು ಎಂದು ತಿಳಿದು ಬಂದಿದೆ. ಈ ಕುರಿತು ಇಂಡಿಯಾ ಟುಡೇ ಆ ಪಬ್ ಆಡಳಿತವನ್ನು ಸಂಪರ್ಕಿಸಿದಾಗ ರಾಹುಲ್ ಅವರು ಮೇ 2ರಂದು ವಧು ಮತ್ತು ವರರ ಕಡೆಯವರಾದ ಐದಾರು ಮಂದಿ ಜತೆಗೆ ಅಲ್ಲಿಗೆ ಆಗಮಿಸಿದ್ದರು ಹಾಗೂ ಆ ಸಂದರ್ಭ ಯಾವುದೇ ಚೀನೀ ರಾಯಭಾರಿ ಇರಲಿಲ್ಲ ಎಂದಿದ್ದಾಗಿ indiatoday ವರದಿ ತಿಳಿಸಿದೆ.

"ರಾಹುಲ್ ಸುಮಾರು ಒಂದೂವರೆ ಗಂಟೆ ತನಕ ಅಲ್ಲಿದ್ದರು ಅದೊಂದು ಖಾಸಗಿ ಭೇಟಿಯಾಗಿತ್ತು" ಎಂಬ ಮಾಹಿತಿಯನ್ನು ಲಾರ್ಡ್ ಆಫ್ ದಿ ಡ್ರಿಂಕ್ಸ್ ಸಿಇಒ ರಬಿನ್ ಶ್ರೇಷ್ಠ indiatoday ಗೆ ತಿಳಿಸಿದ್ದಾರೆ. ರಾಹುಲ್ ಜತೆಗಿದ್ದ ಯುವತಿ ವಧುವಿನ ಸ್ನೇಹಿತೆಯಾಗಿದ್ದರು ಎಂದು ಅವರು ಹೇಳಿದ್ದು ಯುವತಿ ನೇಪಾಳಿಯಾಗಿದ್ದಾರೆ ಆದರೆ ಆಕೆಯ ಹೆಸರು ಮತ್ತಿರ ಮಾಹಿತಿಯು ಅವರ ಖಾಸಗಿತನಕ್ಕೆ ಧಕ್ಕೆ ತರಬಹುದೆಂಬ ಸಲುವಾಗಿ ಪ್ರಕಟಿಸಲಾಗಿಲ್ಲ ಎಂದೂ ವರದಿ ಬೆಟ್ಟು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News