ಧ್ವನಿವರ್ಧಕ ಬಳಕೆಯ ವಿರುದ್ಧ ಪ್ರತಿಭಟನೆ ಮುಂದುವರಿಯಲಿದೆ: ರಾಜ್ ಠಾಕ್ರೆ

Update: 2022-05-04 09:35 GMT

ಮುಂಬೈ: "ರಾಜ್ಯ ಮತ್ತು ಹೊರ ರಾಜ್ಯಗಳಿಂದ ನನಗೆ ಕರೆಗಳು ಬರುತ್ತಿವೆ. ಹಲವೆಡೆ ನನ್ನ ಪಕ್ಷದ ಕಾರ್ಯಕರ್ತರನ್ನು ಬಂಧಿಸಿ ನೋಟಿಸ್ ಜಾರಿ ಮಾಡಲಾಗಿದೆ. ಕಾನೂನನ್ನು ಅನುಸರಿಸುವವರನ್ನು ಬಂಧಿಸಲಾಗುತ್ತಿದೆ. ಈ ವಿಷಯವು ಮಸೀದಿಗಳ ಬಗ್ಗೆ ಮಾತ್ರವಲ್ಲ ಹಲವಾರು ದೇವಾಲಯಗಳಲ್ಲಿ ಅಕ್ರಮ ಧ್ವನಿವರ್ಧಕಗಳಿವೆ. ಧ್ವನಿ ವರ್ಧಕ ಬಳಕೆಯ ವಿರುದ್ಧ ನಮ್ಮ ಪ್ರತಿಭಟನೆ ನಿಲ್ಲುವುದಿಲ್ಲ, ಇದು ಮುಂದುವರಿಯಲಿದೆ" ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ  ಬುಧವಾರ ಹೇಳಿದ್ದಾರೆ.

ಇದು "ಒಂದು ದಿನದ ಸಮಸ್ಯೆಯಲ್ಲ" ಎಂದು ಒತ್ತಿ ಹೇಳಿದ ರಾಜ್ ಠಾಕ್ರೆ, "ಮಸೀದಿಗಳು ಮಾರ್ಗಸೂಚಿಗಳನ್ನು ಅನುಸರಿಸದಿದ್ದರೆ, ಹನುಮಾನ್ ಚಾಲೀಸಾವನ್ನು ಡಬಲ್ ವಾಲ್ಯೂಮ್‌ನಲ್ಲಿ ನುಡಿಸಲಾಗುತ್ತದೆ. ವಿದ್ಯಾರ್ಥಿಗಳು ಹಾಗೂ  ಅಸ್ವಸ್ಥರು ಧ್ವನಿವರ್ಧಕಗಳಿಂದ ಬಳಲುತ್ತಿದ್ದಾರೆ'' ಎಂದರು.

ಎಲ್ಲಿ ಧ್ವನಿವರ್ಧಕಗಳಲ್ಲಿ ಆಝಾನ್ ಮೊಳಗುವುದೋ ಅಲ್ಲಿ ಹನುಮಾನ್ ಚಾಲೀಸಾ ನುಡಿಸುವುದಾಗಿ ರಾಜ್ ಠಾಕ್ರೆ ಅವರು ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಹಾಗೂ  ಸುತ್ತಮುತ್ತಲಿನ ಹಲವಾರು ಮಸೀದಿಗಳು ಇಂದು ಬೆಳಿಗ್ಗೆ ಆಝಾನ್ ವೇಳೆ ಧ್ವನಿವರ್ಧಕಗಳನ್ನು ಸ್ವಿಚ್ ಆಫ್ ಮಾಡಿದ್ದವು ಎಂದು NDTV ವರದಿ ಮಾಡಿದೆ.

ಮಹಾರಾಷ್ಟ್ರದ ಪರ್ಭಾನಿ, ಒಸ್ಮಾನಾಬಾದ್, ಹಿಂಗೋಲಿ, ಜಲ್ನಾ ಭಾಗಗಳು, ನಾಂದೇಡ್, ನಂದುರ್ಬಾರ್, ಶಿರಡಿ  ಹಾಗೂ  ಶ್ರೀರಾಂಪುರ ಸೇರಿದಂತೆ ಹಲವು ಸ್ಥಳಗಳಲ್ಲಿ ಆಝಾನ್ ಸಮಯದಲ್ಲಿ ಧ್ವನಿವರ್ಧಕಗಳು ಸ್ವಿಚ್ ಆಫ್ ಆಗಿದ್ದವು. ಕೆಲವು ಸ್ಥಳಗಳಲ್ಲಿ ಅವುಗಳನ್ನು ಕಡಿಮೆ ಶಬ್ದದೊಂದಿಗೆ ಬಳಸಲಾಗುತ್ತಿತ್ತು.

ರಾಜ್ಯಾದ್ಯಂತ ಸುಮಾರು 250-260 ಎಂಎನ್ ಎಸ್ ಕಾರ್ಯಕರ್ತರನ್ನು ಬಂಧಿಸಲಾಗಿದೆ. ರಾಜ್ ಠಾಕ್ರೆ ಅವರ ನಿವಾಸದ ಹೊರಗೆ ಜಮಾಯಿಸಿದ ಹಲವಾರು ಎಂಎನ್‌ಎಸ್ ಕಾರ್ಯಕರ್ತರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ, ಪುಣೆಯಲ್ಲಿ ಎಂಟು ಎಂಎನ್‌ಎಸ್ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News