ಜೂ.1ರಿಂದ ಕಡಿಯಾಳಿ ದೇವಸ್ಥಾನದ ಬ್ರಹ್ಮಕಲಶೋತ್ಸವ
ಉಡುಪಿ : ಸಮಗ್ರ ಜೀರ್ಣೋದ್ಧಾರಗೊಳ್ಳುತ್ತಿರುವ ಕಡಿಯಾಳಿಯ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಜೂನ್ ೧ರಿಂದ ಪ್ರಾರಂಭಗೊಂಡು ಜೂನ್ ೧೦ರ ತನಕ ನಡೆಯಲಿದೆ ಎಂದು ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಡಾ.ಕಟ್ಟೆ ರವಿರಾಜ್ ಆಚಾರ್ಯ ಬುಧವಾರ ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜೂ.೧ರ ಸಂಜೆ ೪ ಗಂಟೆಗೆ ಉಡುಪಿ ಜೋಡುಕಟ್ಟೆಯಿಂದ ಕಡಿಯಾಳಿ ದೇವಸ್ಥಾನದವರೆಗೆ ಬಿರುದಾವಳಿ, ಕೀಲುಕುದುರೆ ನಾಡಿನ ಸಾಂಸ್ಕೃತಿಕ ವೈವಿಧ್ಯತೆ ತಂಡಗಳೊಂದಿಗೆ ಬೃಹತ್ ಹೊರಕಾಣಿಕೆಯ ಮೆರವಣಿಗೆ ನಡೆಯಲಿದೆ. ಜೂ.೩ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕಲಾಶಭಿಷೇಕ ಪಂಚದುರ್ಗ ಮಂತ್ರ ಹೋಮ, ೮ರಂದು ಬೆಳಗ್ಗೆ ೭:೫೦ರ ಸುಮುಹೂರ್ತದಲ್ಲಿ ಬ್ರಹ್ಮಕುಂಭಾಭಿಷೇಕ ನಡೆಯಲಿದ್ದು ಅಂದು ರಾತ್ರಿ ರಥೋತ್ಸವ ನಡೆಯಲಿದೆ.
ಜೂ.೯ರಂದು ಸಂಜೆ ೭:೦೦ರಿಂದ ಪಿಲಿಚಂಡಿ ಮತ್ತು ಪರಿವಾರ ದೈವಗಳ ಬಾಳು ಭಂಡಾರಶ್ರೀಕ್ಷೇತ್ರದಿಂದ ಹೊರಟು ರಾತ್ರಿ ದೈವಗಳ ಕೋಲ ನಡೆಯಲಿದೆ ಜೂ.೧೦ರಂದು ಧಾರ್ಮಿಕ ಕಾರ್ಯಕ್ರಮ ಸಮಾಪನೆ ಗೊಳ್ಳಲಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಾಗೇಶ್ ಹೆಗ್ಡೆ ತಿಳಿಸಿದರು.
ಆಮಂತ್ರಣ ಪತ್ರಿಕೆ ಬಿಡುಗಡೆ: ಕಡಿಯಾಳಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ ಮೇ ೬ರಂದು ಸಂಜೆ ೭:೦೦ಗಂಟೆಗೆ ನಡೆಯಲಿದೆ. ಕೇಂದ್ರದ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಆಮಂತ್ರಣ ಪತ್ರಿಕೆ ಯನ್ನು ಬಿಡುಗಡೆಗೊಳಿಸಲಿದ್ದಾರೆ. ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆ ವಹಿಸಲಿ ದ್ದಾರೆ. ಈ ಸಂದರ್ಭದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಭಾಗವಹಿಸಲಿದ್ದಾರೆ. ಬಳಿಕ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಪಾವಂಜೆ ಶ್ರೀಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ ‘ಶ್ರೀದೇವಿ ಲಲಿತೋಪಾಖ್ಯಾ’ ಎಂಬ ಯಕ್ಷಗಾನ ಪ್ರದರ್ಶನವಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿ ತಿಳಿಸಿದರು.
ಸಾಂಸ್ಕೃತಿಕ ಹಬ್ಬ: ಬ್ರಹ್ಮಕಲಶೋತ್ಸವದ ಪ್ರಯುಕ್ತ ನಾಡಿನ ವಿವಿಧ ಕಲಾವಿದರ ಸಾಂಸ್ಕೃತಿಕ ಹಬ್ಬ ನಡೆಯಲಿದೆ. ಪ್ರತಿದಿನವೂ ಸಂಜೆ ೭ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. ರಾಘವೇಂದ್ರ ಜನ್ಸಾಲೆ ನೇತೃತ್ವದಲ್ಲಿ ಸಾಲಿಗ್ರಾಮ ಮೇಳದಿಂದ ಯಕ್ಷಗಾನ, ಶ್ರೀವಿದ್ಯಾಭೂಷಣ ಇವರಿಂದ ಸಂಗೀತ ಕಾರ್ಯಕ್ರಮ, ಪುತ್ತೂರು ಜಗದೀಶ್ ಆಚಾರ್ಯರ ಸಂಗೀತಗಾನ, ತುಳುನಾಡ ವೈಭವ ನಡೆಯಲಿದೆ. ಪ್ರತಿದಿನವೂ ಅಪರಾಹ್ನ 12 ರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನವೂ ಸಾರ್ವಜನಿಕ ಅನ್ನಸಂತರ್ಪಣೆಯೂ ನಡೆಯಲಿದೆ ಎಂದರು.
ಪ್ರತಿದಿನ ಸಂಜೆ ೫:೩೦ರಿಂದ ಧರ್ಮ ವೇದಿಕೆಯಲ್ಲಿ ದೇಶದ ವಿವಿಧ ನಾಯಕರಿಂದ ಹಾಗೂ ಧಾರ್ಮಿಕ ನಾಯಕರು, ಸ್ವಾಮೀಜಿಗಳಿಂದ ರಾಷ್ಟ್ರ ಚಿಂತನೆ ಮತ್ತು ಧರ್ಮ ಚಿಂತನೆ ನಡೆಯಲಿದೆ. ವಿಶೇಷವಾಗಿ ಉಡುಪಿ, ದಕ್ಷಿಣಕನ್ನಡ ಜಿಲ್ಲೆ ಮತ್ತು ಉತ್ತರ ಕನ್ನಡ ಜಿಲ್ಲೆಯ ದೇವಸ್ಥಾನಗಳ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಸೇರಿ ಕನಿಷ್ಠ ಮೂರು ಮಂದಿ ವ್ಯವಸ್ಥಾಪನ ಸಮಿತಿಯ ಸದಸ್ಯರು ಭಾಗವಹಿಸಿ ಎಲ್ಲರ ಅಭಿಪ್ರಾಯವನ್ನು ಒಟ್ಟು ಗೂಡಿಸಿ ಸರಕಾರಕ್ಕೆ ಹಕ್ಕೊತ್ತಾಯ ಮಂಡಿಸಲು ನಿರ್ಧರಿಸಲಾಗಿದೆ ಎಂದರು.
ಇದರೊಂದಿಗೆ ದೇವಸ್ಥಾನಗಳ ಪರಿಚಾರಕರು, ದೈವಸ್ಥಾನಗಳ ಪರಿಚಾರಕರ ಸಮಾವೇಶ, ಅರ್ಚಕರ ಸಮಾವೇಶದ ಮೂಲಕ ಧಾರ್ಮಿಕ ಚಿಂತನೆಗಳನ್ನು ನಡೆಸಿ ಸರಕಾರಕ್ಕೆ ದೇವಸ್ಥಾನಗಳ ಸಮಸ್ಯೆಗಳನ್ನು ತಿಳಿಸಿ ಅದನ್ನು ಪರಿಹರಿಸಲು ಶ್ರೀಕ್ಷೇತ್ರದಿಂದ ದಿಟ್ಟ ಹೆಜ್ಜೆ ಇಡಲು ನಿರ್ಧರಿಸಲಾಗಿದೆ ಎಂದು ರಾಘವೇಂದ್ರ ಕಿಣಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಪಿ.ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಕಾಮತ್, ಹೊರಕಾಣಿಕೆ ಸಮಿತಿ ಅಧ್ಯಕ್ಷ ಭಾಸ್ಕರ ಶೇರಿಗಾರ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಮಂಜುನಾಥ್ ಹೆಬ್ಬಾರ್, ನಾಗರಾಜ್ ಶೆಟ್ಟಿ ಉಪಸ್ಥಿತರಿದ್ದರು.