ಕೋವಿಡ್ ಲಸಿಕೆ:ಸುಪ್ರೀಂ ಕೋರ್ಟ್‌ಗೆ ಕೇಂದ್ರವು ಹೇಳಿದ್ದ ಎರಡು ಸುಳ್ಳುಗಳು

Update: 2022-05-05 16:21 GMT
REUTERS

ಹೊಸದಿಲ್ಲಿ,ಮೇ 5: ಕೋವಿಡ್ ಲಸಿಕೆಯನ್ನು ದೇಶದಲ್ಲಿ ಕಡ್ಡಾಯಗೊಳಿಸುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ತನ್ನ ಮೇ 2ರ ಆದೇಶದಲ್ಲಿ ಸ್ಪಷ್ಟಪಡಿಸಿದೆ. ತೀರ್ಪಿನಲ್ಲಿಯ ಮುಖ್ಯಾಂಶವು ಪತ್ರಿಕೆಗಳಲ್ಲಿ ಮಹತ್ವದ ಸುದ್ದಿಯಾಗಿದ್ದರೂ 115 ಪುಟಗಳ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪ್ರೇರೇಪಿಸಿದ ಕೇಂದ್ರ ಸರಕಾರದ ಕೆಲವು ಉತ್ತರಗಳು ಭಾರತದ ಕೋವಿಡ್ ಲಸಿಕೆ ಅಭಿಯಾನದ ನಿರ್ವಹಣೆಯಲ್ಲಿ ಅದರ ವಿಶ್ವಾಸವನ್ನು ದುರ್ಬಲಗೊಳಿಸುವ ಸುಳ್ಳುಗಳನ್ನು ಒಳಗೊಂಡಿದ್ದವು.

ಅರ್ಜಿದಾರರಾಗಿದ್ದ ಮಕ್ಕಳ ತಜ್ಞ ಹಾಗೂ ಪ್ರತಿರಕ್ಷಣೆ ಕುರಿತು ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ (ಎನ್‌ಟಿಎಜಿಐ) ಮಾಜಿ ಸದಸ್ಯ ಜಾಕೋಬ್ ಪುಳಿಯೆಲ್ ಅವರು ಇತರ ವಿಷಯಗಳ ಜೊತೆಗೆ,ವಿವಿಧ ಲಸಿಕೆಗಳಿಗೆ ಅನುಮತಿ ನೀಡುವ ಸರಕಾರದ ನಿರ್ಧಾರಗಳು ಪಾರದರ್ಶಕವಾಗಿರಲಿಲ್ಲ ಮತ್ತು ಸಂಬಂಧಿತ ದತ್ತಾಂಶಗಳನ್ನು ಯಾವಾಗಲೂ ಎನ್‌ಟಿಎಜಿಐ ಮುಂದೆ ಇರಿಸಲಾಗಿರಲಿಲ್ಲ ಎಂದು ವಾದಿಸಿದ್ದರು.

ತನ್ನ ಅರ್ಜಿಯಲ್ಲಿ ಪುಳಿಯೆಲ್ ಅವರು ಕೊರ್ಬೆವ್ಯಾಕ್ಸ್ ಕುರಿತು The Wire Science  ನ ವರದಿಯ ಉದಾಹರಣೆಯನ್ನು ಉಲ್ಲೇಖಿಸಿದ್ದರು. ಸರಕಾರವು ಎನ್‌ಟಿಎಜಿಐ ಅನುಮತಿಯಿಲ್ಲದೆ 12ರಿಂದ 14 ವರ್ಷ ವಯೋಮಾನದ ಮಕ್ಕಳಲ್ಲಿ ಲಸಿಕೆ ಬಳಕೆಗೆ ಅನುಮೋದನೆ ನೀಡಿತ್ತು ಎನ್ನುವುದನ್ನು ಈ ವರದಿಯು ಬಹಿರಂಗಗೊಳಿಸಿತ್ತು. ವರದಿಯು ಎನ್‌ಟಿಎಜಿಐನ ಹಾಲಿ ಸದಸ್ಯ ಜಯಪ್ರಕಾಶ ಮುಳಿಯಿಲ್ ಅವರ ಹೇಳಿಕೆಗಳನ್ನು ಒಳಗೊಂಡಿತ್ತು.

ಎನ್‌ಟಿಎಜಿಐ ಲಸಿಕೆಗಳಿಗೆ ಅನುಮೋದನೆ ಕುರಿತು ಭಾರತೀಯ ಔಷಧಿ ಮಹಾ ನಿಯಂತ್ರಕ (ಡಿಜಿಸಿಐ)ತ ನಿರ್ಧಾರಗಳನ್ನು ಪುನರ್‌ಪರಿಶೀಲಿಸುವ ಸ್ವತಂತ್ರ ತಜ್ಞರು ಮತ್ತು ಸರಕಾರಿ ಅಧಿಕಾರಿಗಳನ್ನೊಳಗೊಂಡ ಸಮಿತಿಯಾಗಿದೆ. ಹೀಗಾಗಿ ಅದು ಭಾರತದ ಕೋವಿಡ್ ಪ್ರತಿಕ್ರಿಯೆಯನ್ನು ಮುನ್ನಡೆಸುವ ಅಧಿಕಾರಶಾಹಿ ಯಂತ್ರದ ಪ್ರಮುಖ ಭಾಗವಾಗಿದೆ.

ಆದಾಗ್ಯೂ,ಎಲ್ಲ ಲಸಿಕೆಗಳು ಎನ್‌ಟಿಎಜಿಐ ಅನುಮತಿಯನ್ನು ಪಡೆದಿವೆ ಎಂದು ಭಾರತ ಸರಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತ್ತು. ಎನ್‌ಟಿಎಜಿಐ ಸಭೆಗಳ ‘ವಿವರವಾದ ’ ನಡಾವಳಿಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಲಾಗಿದೆ ಎಂದೂ ಕೇಂದ್ರದ ಪ್ರತಿನಿಧಿ ಸರ್ವೋಚ್ಚ ನ್ಯಾಯಾಲಯದಲ್ಲಿ ಹೇಳಿದ್ದರು.

ಆದರೆ ಇವೆರಡೂ ವಿಷಯಗಳಲ್ಲಿ ಸರಕಾರವು ಸುಳ್ಳು ಹೇಳಿತ್ತು!

ಎನ್‌ಟಿಎಜಿಐ ಸಭೆಗಳ ಯಾವುದೇ ನಡಾವಳಿಗಳನ್ನು ಉಭಯ ವೆಬ್ ಸೈಟ್‌ಗಳಲ್ಲಿ ಪ್ರಕಟಿಸಿರಲಿಲ್ಲ ಎನ್ನುವುದನ್ನು The Wire Science  ಬಯಲಿಗೆಳೆದಿದೆ. ಎರಡನೆಯದಾಗಿ ಎನ್‌ಟಿಎಜಿಐನ ಮೂವರು ಸದಸ್ಯರ ಅತ್ಯುನ್ನತ ಸಮಿತಿಯು ಮಕ್ಕಳಲ್ಲಿ ಕೊರ್ಬೆವ್ಯಾಕ್ಸ್ ಬಳಕೆಗೆ ಅನುಮತಿ ನೀಡಿರಲಿಲ್ಲ ಎನ್ನುವುದನ್ನು ಮುಳಿಯಿಲ್ ಮತ್ತು ಅವರ ಸಹಸದಸ್ಯರೋರ್ವರು ದೃಢಪಡಿಸಿದ್ದರು.

ಆದಾಗ್ಯೂ ಎನ್‌ಟಿಎಜಿಐ ಕೊರ್ಬೆವ್ಯಾಕ್ಸ್ ಬಳಕೆಗೆ ಶಿಫಾರಸು ಮಾಡಿತ್ತು ಎಂಬ ಸರಕಾರದ ಹೇಳಿಕೆಯನ್ನು ನಂಬಿದ್ದ ಸರ್ವೋಚ್ಚ ನ್ಯಾಯಾಲಯವು The Wire Science ನ ವರದಿಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿತ್ತು. ಪ್ರತಿರಕ್ಷಣೆ ನಂತರದ ಪ್ರತಿಕೂಲ ಘಟನೆಗಳ (ಎಇಎಫ್‌ಐ) ಮೇಲೆ ನಿಗಾಯಿರಿಸುವ ವ್ಯವಸ್ಥೆಯು ಭಾರತದಲ್ಲಿ ಕೋವಿಡ್ ಪ್ರಕರಣಗಳಲ್ಲಿ ನಿಷ್ಕ್ರಿಯವಾಗಿತ್ತು ಎಂದೂ ವಾದಿಸಿದ್ದ ಪುಳಿಯೆಲ್,ಲಸಿಕೆ ನೀಡಿಕೆಯ ಬಳಿಕ ಸಾವುಗಳ ಕಾರಣಗಳನ್ನು ತಿಳಿಯಲು ನಡೆಸಲಾಗಿದ್ದ ತನಿಖೆಯು ಅಸ್ಪಷ್ಟವಾಗಿರುವುದರಿಂದ ಈ ವ್ಯವಸ್ಥೆಯು ಅಪಾರದರ್ಶಕವಾಗಿದೆ ಎಂದು ಹೇಳಿದ್ದರು. ಆದರೆ ನ್ಯಾಯಾಲಯವು ಈ ವಾದವನ್ನು ಪುರಸ್ಕರಿಸಿರಲಿಲ್ಲ.

ಅದೇನೇ ಇದ್ದರೂ ಲಸಿಕೆ ಪಡೆದುಕೊಂಡಿರುವವರು ಅಡ್ಡ ಪರಿಣಾಮಗಳ ಬಗ್ಗೆ ವರದಿ ಮಾಡಲು ಯಾವುದೇ ಖಾಸಗಿ ವೈದ್ಯರ ಬಳಿ ತೆರಳಬಹುದು ಎನ್ನುವುದನ್ನು ಖಚಿತಪಡಿಸುವಂತೆ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ಸೂಚಿಸಿದೆ. ಪ್ರಸ್ತುತ ಲಸಿಕೆಯ ಅಡ್ಡಪರಿಣಾಮಗಳನ್ನು ಕೋವಿನ್ ಪೋರ್ಟಲ್‌ನಲ್ಲಿ ಒದಗಿಸಿರುವ ಸಹಾಯವಾಣಿ ಸಂಖ್ಯೆಯ ಮೂಲಕ ಮಾತ್ರ ವರದಿ ಮಾಡಲು ಸಾಧ್ಯವಿದೆ.

ಪ್ರತಿಯೊಂದೂ ಅಡ್ಡ ಪರಿಣಾಮವು ಲಸಿಕೆಗೆ ಸಂಬಂಧಿಸಿರುವುದಿಲ್ಲ. ವ್ಯಕ್ತಿಯು ಅಡ್ಡಪರಿಣಾಮವನ್ನು ವರದಿ ಮಾಡಿದಾಗ ಜಿಲ್ಲಾಮಟ್ಟದ ಸಮಿತಿಯೊಂದು ಅದಕ್ಕೆ ಲಸಿಕೆ ಕಾರಣವಾಗಿದೆಯೇ ಎಂಬ ಬಗ್ಗೆ ಮಾಲ್ಯಮಾಪನ ನಡೆಸುತ್ತದೆ. ಪ್ರತ್ಯೇಕ ರಾಜ್ಯ ಮತ್ತು ರಾಷ್ಟೀಯ ಮಟ್ಟದ ಸಮಿತಿಗಳೂ ಇದೇ ಬಗೆಯ ಮಾಲ್ಯಮಾಪನ ನಡೆಸುತ್ತವೆ.

ಪುಳಿಯೆಲ್ ಹೇಳಿರುವಂತೆ ಈ ಮಾಲ್ಯಮಾಪನಗಳ ಕುರಿತು ಯಾವುದೇ ಮಾಹಿತಿಯು ಸಾರ್ವಜನಿಕ ಕ್ಷೇತ್ರದಲ್ಲಿ ಲಭ್ಯವಿಲ್ಲ.

  ಸರಕಾರವು ತನ್ನ ಉತ್ತರದಲ್ಲಿ 2021,ನ.24ರವರೆಗೆ 119.38 ಕೋ.ಡೋಸ್ ಲಸಿಕೆ ನೀಡಲಾಗಿದ್ದು,2,116 ತೀವ್ರ ಸ್ವರೂಪದ ಅಡ್ಡ ಪರಿಣಾಮಗಳು ದಾಖಲಾಗಿದ್ದವು ಎಂದು ತಿಳಿಸಿತ್ತು. ನ್ಯಾಯಾಲಯದ ಆದೇಶದಂತೆ ಕೇಂದ್ರ ಆರೋಗ್ಯ ಸಚಿವಾಲಯದ ವೆಬ್‌ಸೈಟ್ ಅಡ್ಡ ಪರಿಣಾಮಗಳ ಪ್ರಕರಣದಲ್ಲಿ ಸಾವುಗಳ ವೌಲ್ಯಮಾಪನ ಫಲಿತಾಂಶಗಳನ್ನು ಒಳಗೊಂಡಿದೆ ಮತ್ತು ಸಾರ್ವಜನಿಕರು ಅಡ್ಡಪರಿಣಾಮಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಅಲ್ಲಿಂದ ಪಡೆದುಕೊಳ್ಳಬಹುದು ಎಂದೂ ಅದು ಹೇಳಿತ್ತು.

ಇದು ಸತ್ಯವಲ್ಲ. ಮೇ 5ರಂದು (ಇಂದು) ಬೆಳಿಗ್ಗೆ 7:30ಕ್ಕೆ ಇದ್ದಂತೆ ಕೇಂದ್ರ ಆರೋಗ್ಯ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಇಂತಹ ಯಾವುದೇ ಮಾಹಿತಿ ಇರಲಿಲ್ಲ.

 ನ್ಯಾಯಾಲಯದಲ್ಲಿ ಸಲ್ಲಿಕೆಯಾದ ಪ್ರಮಾಣಪತ್ರಗಳಲ್ಲಿಯ ತಪ್ಪು ಮಾಹಿತಿಯು ಅದರ ದಾರಿಯನ್ನು ತಪ್ಪಿಸುತ್ತದೆ ಮತ್ತು ಅದರಲ್ಲಿ ಭಾಗಿಯಾಗಿರುವವರನ್ನು ಪ್ರಶ್ನಿಸುವುದನ್ನು ತಡೆಯುತ್ತದೆ ಮತ್ತು ಬಹುಶಃ ಸರಿಪಡಿಸುವ ಕ್ರಮವನ್ನು ಕೈಗೊಳ್ಳುವುದನ್ನು ಕೂಡ. ಉದಾಹರಣೆಗೆ ವಾಸ್ತವದಲ್ಲಿ ಎನ್‌ಟಿಎಜಿಐ ಕೊರ್ಬೆವ್ಯಾಕ್ಸ್‌ನ್ನು ಅನುಮೋದಿಸಿಲ್ಲ ಎನ್ನುವುದನ್ನು ನ್ಯಾಯಾಲಯಕ್ಕೆ ದೃಢಪಡಿಸಿದ್ದರೆ,ಅದು ಹೇಗಾದರೂ ಮಕ್ಕಳಿಗೆ ಲಸಿಕೆಯನ್ನು ಅನುಮೋದಿಸುವ ಸರಕಾರದ ನಿರ್ಧಾರಕ್ಕೆ ವಿವರಣೆಯನ್ನು ಕೇಳಬಹುದಿತ್ತು.

ಅಂತಿಮವಾಗಿ ತಕ್ಕಡಿಯಲ್ಲಿ ಒಂದೆಡೆ ವೈರಲ್ ಸೋಂಕಿನಿಂದ ಭಾರೀ ಜನಸಂಖ್ಯೆಯ ಸುರಕ್ಷಿತ ರಕ್ಷಣೆ ಮತ್ತು ಇನ್ನೊಂದೆಡೆ ದುರಾಡಳಿತ ತೂಗುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News