ಆಧಾರ್‌ನ ಬಯೋಮೆಟ್ರಿಕ್‌ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ: ದಿಲ್ಲಿ ಹೈಕೋರ್ಟ್‌ಗೆ ಯುಐಡಿಎಐ ಸ್ಪಷ್ಟನೆ

Update: 2022-05-05 18:05 GMT
Photo: PTI

ಹೊಸದಿಲ್ಲಿ,ಮೇ 6: ತಾನು ಆಧಾರ್ ಕಾಯ್ದೆಯಡಿ ಸಂಗ್ರಹಿಸಿದ ಪ್ರಮುಖ ಬಯೋಮೆಟ್ರಿಕ್ ಮಾಹಿತಿಗಳನ್ನು ಯಾರೊಂದಿಗೂ ಯಾವುದೇ ಕಾರಣಕ್ಕೂ ಹಂಚಿಕೊಳ್ಳಲಾಗುವುದಿಲ್ಲವೆಂದು ಭಾರತೀಯ ವಿಶೇಷ ಗುರುತು ಪ್ರಾಧಿಕಾರ (ಯುಐಡಿಎಐ)ವು ದಿಲ್ಲಿ ಹೈಕೋರ್ಟ್‌ಗೆ ಗುರುವಾರ ತಿಳಿಸಿದೆ.

ಅಪರಾಧ ವಿಧಿವಿಧಾನ (ಫಾರೆನ್ಸಿಕ್) ಪರೀಕ್ಷೆಯ ಉದ್ದೇಶಗಳಿಗೆ ಯೋಗ್ಯದ ತಂತ್ರಜ್ಞಾನ ಅಥವಾ ಪ್ರಕ್ರಿಯೆ ಆಧಾರಿತವಾದ ಬಯೋಮೆಟ್ರಿಕ್ ಮಾಹಿತಿಯನ್ನು ತಾನು ಸಂಗ್ರಹಿಸುವುದಿಲ್ಲವೆಂದು ಯುಐಎಡಿಐ ಸ್ಪಷ್ಟಪಡಿಸಿದೆ.

        ತಾನು ಸಂಗ್ರಹಿಸುವ ಮಹತ್ವದ ಬಯೋಮೆಟ್ರಿಕ್ ಮಾಹಿತಿಗಳು ಯಾವ್ಯಾವು ಎಂಬುದನ್ನು ಆಧಾರ್ ಕಾಯ್ದೆಯ ಸೆಕ್ಷನ್ 2 (ಜೆ)ನಲ್ಲಿ ವ್ಯಾಖ್ಯಾನಿಸಲಾಗಿದೆ. ಬೆರಳಚ್ಚು, ಐರಿಸ್ ಸ್ಕಾನ್ ಅಥವಾ ನಿಯಾವಳಿಗಳಲ್ಲಿ ನಿರ್ದಿಷ್ಟಪಡಿಸಲಾಂತಹ ಇತರ ಜೈವಿಕ ವಿವರಗಳನ್ನು ಮಾತ್ರ ಸಂಗ್ರಹಿಸುವುದಾಗಿ ಯುಐಎಡಿಐ ದಿಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದೆ. ಹೀಗಾಗಿ, ಈ ಮಹತ್ವದ ಬಯೋಮೆಟ್ರಿಕ್ ಮಾಹಿತಿಗಳನ್ನು ಯಾವುದೇ ಕಾರಣಕ್ಕಾಗಿ, ಯಾರೊಂದಿಗೂ ಹಂಚಿಕೊಳ್ಳುವುದನ್ನು ಕಾನೂನಿನಡಿ ಸ್ಪಷ್ಟವಾಗಿ ನಿಷೇಧಿಸಲಾಗಿದೆ ಎಂದು ಅದು ಹೇಳಿದೆ.

   2018ರಲ್ಲಿ ನಡೆದ ದರೋಡೆ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯ ವೇಳೆ ಆಧಾರ್ ದತ್ತಾಂಶದಲ್ಲಿ ಸಂಗ್ರಹಿಸಲಾದ ಬಯೋಮೆಟ್ರಿಕ್ ವಿವರಗಳನ್ನು ಘಟನೆ ನಡೆದ ಸ್ಥಳದಲ್ಲಿ ಸಂಗ್ರಹಿಸಲಾದ ಬಯೋಮೆಟ್ರಿಕ್ ದತ್ತಾಂಶಗಳ ಜೊತೆ ತಾಳೆ ಮಾಡಲು ಅವಕಾಶ ನೀಡಬೇಕೆಂದು ಪ್ರಾಸಿಕ್ಯೂಶನ್ ನ್ಯಾಯಾಲಯವನ್ನು ಕೋರಿದ್ದ ಹಿನ್ನೆಲೆಯಲ್ಲಿ ಯುಐಎಡಿಐ ಈ ಅಫಿಡವಿಟ್ ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News