ಪಂಜಾಬ್‌ ಪೊಲೀಸರಿಂದ ಬಿಜೆಪಿ ನಾಯಕ ಬಗ್ಗಾರನ್ನು ತಮ್ಮ ವಶಕ್ಕೆ ಪಡೆದ ದಿಲ್ಲಿ ಪೊಲೀಸರು

Update: 2022-05-07 14:28 GMT
Photo:twitter

ಹೊಸದಿಲ್ಲಿ,ಮೇ 6: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಶುಕ್ರವಾರ ಬೆಳಿಗ್ಗೆ ಪಂಜಾಬ್‌  ಪೊಲೀಸರಿಂದ ತನ್ನ ದಿಲ್ಲಿ ನಿವಾಸದಿಂದ ಬಂಧಿಸಲ್ಪಟ್ಟಿದ್ದ ಬಿಜೆಪಿ ವಕ್ತಾರ ತಜಿಂದರ್ ಬಗ್ಗಾರನ್ನು ಹರ್ಯಾಣ ಪೊಲೀಸರು ದಿಲ್ಲಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಪಂಜಾಬ್‌  ಪೊಲೀಸರು ಬಗ್ಗಾರನ್ನು ಮೊಹಾಲಿಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಅವರನ್ನು ತಡೆದಿದ್ದ ಹರ್ಯಾಣ ಪೊಲೀಸರು ಕುರುಕ್ಷೇತ್ರ ಠಾಣೆಗೆ ಒಯ್ದಿದ್ದರು. ಹರ್ಯಾಣ ಪೊಲೀಸರಿಂದ ಮಾಹಿತಿ ಪಡೆದ ದಿಲ್ಲಿ ಪೊಲೀಸ್ ಅಧಿಕಾರಿಗಳ ತಂಡವೊಂದು ಕೂಡ ಕುರುಕ್ಷೇತ್ರ ಪೊಲೀಸ್ ಠಾಣೆಯನ್ನು ತಲುಪಿತ್ತು.

ಬಗ್ಗಾರ ತಂದೆ ಪ್ರೀತಪಾಲ್ ಸಿಂಗ್ ಬಗ್ಗಾ ಅವರು ದಿಲ್ಲಿ ಪೊಲೀಸರಲ್ಲಿ ಅಪಹರಣದ ದೂರನ್ನು ದಾಖಲಿಸಿದ ಬಳಿಕ ಪಂಜಾಬ್‌  ಪೊಲೀಸ್ ತಂಡವನ್ನು ತಡೆಯಲಾಗಿತ್ತು. ಪಂಜಾಬ್‌  ಪೊಲೀಸರು ತನ್ನ ಮೇಲೆ ಹಲ್ಲೆಯನ್ನೂ ನಡೆಸಿದ್ದರು ಎಂದು ಅವರು ಆರೋಪಿಸಿದ್ದರು.

‘ಇಂದು ಬೆಳಿಗ್ಗೆ ನಮ್ಮ ಮನೆಗೆ ಆಗಮಿಸಿದ್ದ 10-15 ಪೊಲೀಸರ ತಂಡವು ತಜಿಂದರ್ ರನ್ನು ಹೊರಗೆ ಎಳೆದೊಯ್ದಿತ್ತು. ಘಟನೆಯ ವೀಡಿಯೊ ಚಿತ್ರೀಕರಿಸಲು ನಾನು ಮೊಬೈಲ್ ಫೋನ್ ಕೈಗೆತ್ತಿಕೊಂಡಾಗ ಪೊಲೀಸರು ನನ್ನನ್ನು ಇನ್ನೊಂದು ಕೋಣೆಗೆ ಕರೆದೊಯ್ದು ಮುಖಕ್ಕೆ ಗುದ್ದಿದ್ದರು ’ ಎಂದು ಪ್ರೀತಿಪಾಲ್ ಆರೋಪಿಸಿದ್ದರೆ, ತನ್ನ ಮಗನಿಗೆ ಶಿರವಸ್ತ್ರ ಧರಿಸಿಕೊಳ್ಳಲೂ ಪೊಲೀಸರು ಅವಕಾಶ ನೀಡಿರಲಿಲ್ಲ ಎಂದು ಬಗ್ಗಾರ ತಾಯಿ ಆರೋಪಿಸಿದ್ದಾರೆ.

ಈ ನಡುವೆ ತಮ್ಮ ತಂಡವನ್ನು ಕುರುಕ್ಷೇತ್ರ ಪೊಲೀಸ್ ಠಾಣೆಯಿಂದ ಬಿಡುಗಡೆಗೊಳಿಸುವಂತೆ ಪಂಜಾಬ್‌  ಪೊಲೀಸರು ಹರ್ಯಾಣ ಪೊಲೀಸರನ್ನು ಕೇಳಿಕೊಂಡಿದ್ದಾರೆ. ತಮ್ಮ ತಂಡವನ್ನು ಅಕ್ರಮ ದಿಗ್ಬಂಧನದಲ್ಲಿ ಇರಿಸಲಾಗಿದೆ ಮತ್ತು ಅಪರಾಧ ನ್ಯಾಯ ವ್ಯವಸ್ಥೆಯ ಆಡಳಿತದಲ್ಲಿ ಹಸ್ತಕ್ಷೇಪವಾಗಿದೆ ಎಂದು ಅವರು ಪತ್ರದಲ್ಲಿ ದೂರಿದ್ದಾರೆ.

ದಿಲ್ಲಿ ಪೊಲೀಸರು ಅತಿಕ್ರಮ ಪ್ರವೇಶ, ಅಪಹರಣ, ಅಕ್ರಮ ದಿಗ್ಬಂಧನ, ಲೂಟಿ ಮತ್ತು ಧಾರ್ಮಿಕ ಭಾವನೆಗಳನ್ನು ಅವಮಾನಿಸಿದ ಆರೋಪಗಳಲ್ಲಿ ಪಂಜಾಬ್‌  ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಎಂದು ಬಿಜೆಪಿಯ ದಿಲ್ಲಿ ಘಟಕದ ನಾಯಕ ಕಪಿಲ್ ಮಿಶ್ರಾ ಶುಕ್ರವಾರ ಟ್ವೀಟಿಸಿದ್ದಾರೆ.

ಪಕ್ಷವು ಬಗ್ಗಾರ ಬೆಂಬಲಕ್ಕಿದೆ ಮತ್ತು ಅವರ ಬಿಡುಗಡೆಗೆ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತದೆ ಎಂದು ಬಿಜೆಪಿ ಯುವ ಘಟಕದ ಅಧ್ಯಕ್ಷ ತೇಜಸ್ವಿ ಸೂರ್ಯ ಟ್ವೀಟಿಸಿದ್ದಾರೆ.

ತನಿಖೆಗೆ ಸಹಕರಿಸುವಂತೆ ಬಗ್ಗಾಗೆ ಐದು ನೋಟಿಸ್ ಗಳನ್ನು ಕಳುಹಿಸಿದ್ದೆವು. ಆದರೆ ಅವರು ಉದ್ದೇಶಪೂರ್ವಕವಾಗಿ ತನಿಖೆಗೆ ಹಾಜರಾಗಿರಲಿಲ್ಲ. ಕಾನೂನಿನ ಸೂಕ್ತ ಪ್ರಕ್ರಿಯೆಗಳನ್ನು ಅನುಸರಿಸಿದ ನಂತರವೇ ಅವರನ್ನು ದಿಲ್ಲಿ ನಿವಾಸದಿಂದ ಬಂಧಿಸಿದ್ದೇವೆ ಎಂದು ಪಂಜಾಬ್‌  ಪೊಲೀಸರು ಬೆಳಿಗ್ಗೆ ತಿಳಿಸಿದ್ದರು.

ಆಪ್ನ ಪಂಜಾಬ್‌  ಘಟಕದ ನಾಯಕ ಸನ್ನಿ ಸಿಂಗ್ ಅಹ್ಲುವಾಲಿಯಾ ಬಗ್ಗಾ ವಿರುದ್ಧ ದೂರು ದಾಖಲಿಸಿದ್ದರು. ಮಾ.30ರಂದು ಕೇಜ್ರಿವಾಲ್ ನಿವಾಸದ ಹೊರಗೆ ನಡೆದಿದ್ದ ಪ್ರತಿಭಟನೆ ಸಂದರ್ಭ ಬಗ್ಗಾ ಬೆದರಿಕೆಯೊಡ್ಡಿದ್ದರು ಎಂದು ಅವರು ಆರೋಪಿಸಿದ್ದರು. ತಾನು ಕೇಜ್ರಿವಾಲ್ ರನ್ನು ಜೀವಸಹಿತ ಬಿಡುವುದಿಲ್ಲ ಎಂದು ಬಗ್ಗಾ ಟಿವಿ ವಾಹಿನಿಗಳಿಗೆ ಹೇಳಿದ್ದರೆನ್ನಲಾಗಿದೆ.
ಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸುವ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಾಕಾರಿ ವಿಷಯಗಳನ್ನು ಪೋಸ್ಟ್ ಮಾಡುವ ಮೂಲಕ ಮುನ್ನೆಲೆಗೆ ಬಂದಿದ್ದ ಬಗ್ಗಾರನ್ನು 2017ರಲ್ಲಿ ಬಿಜೆಪಿ ವಕ್ತಾರನಾಗಿ ನೇಮಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News