"ಇದು ನ್ಯಾಯದ ವಿಡಂಬನೆ": ಆಝಂ ಖಾನ್ ಜಾಮೀನು ವಿಳಂಬದ ಕುರಿತು ಸುಪ್ರೀಂ ಕೋರ್ಟ್ ಅಸಮಾಧಾನ

Update: 2022-05-06 10:18 GMT

ಹೊಸದಿಲ್ಲಿ: ಭೂಕಬಳಿಕೆ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಆಝಂ ಖಾನ್‌ ಅವರ ಜಾಮೀನು ಅರ್ಜಿ ವಿಚಾರಣೆ ವಿಳಂಬವಾಗಿರುವುದಕ್ಕೆ ಶುಕ್ರವಾರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌, ಇದು ನ್ಯಾಯದ ಅಪಹಾಸ್ಯ ಎಂದು ಹೇಳಿದೆ.

ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಹಾಗೂ  ಬಿ. ಆರ್. ಗವಾಯಿ ಅವರು 87 ಪ್ರಕರಣಗಳಲ್ಲಿ 86 ಪ್ರಕರಣಗಳಲ್ಲಿ ಖಾನ್ ಜಾಮೀನು ಪಡೆದಿರುವುದನ್ನು ಗಮನಕ್ಕೆ ತೆಗೆದುಕೊಂಡಿದ್ದು,   ಮೇ 11 ರಂದು ಈ ವಿಷಯವನ್ನು ವಿಚಾರಣೆ ನಡೆಸುವುದಾಗಿ ಹೇಳಿದರು.

"ಅವರು (ಖಾನ್) ಇಷ್ಟು ದಿನ ಒಂದನ್ನು ಹೊರತುಪಡಿಸಿ ಎಲ್ಲಾ ವಿಷಯಗಳಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ, ಇದು ನ್ಯಾಯದ ಅಪಹಾಸ್ಯವಾಗಿದೆ. ನಾವು ಹೆಚ್ಚೇನೂ ಹೇಳುವುದಿಲ್ಲ. ನಾವು ಅದನ್ನು ಬುಧವಾರ ಆಲಿಸುತ್ತೇವೆ" ಎಂದು ಪೀಠ ಹೇಳಿದೆ.

ಜಾಮೀನು ಅರ್ಜಿಯ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದೆ ಎಂದು ಖಾನ್ ಪರ ವಾದ ಮಂಡಿಸಿದ ವಕೀಲರು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

ಮುಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದ ಪ್ರಾಜೆಕ್ಟ್‌ಗಾಗಿ ಆಸ್ತಿಯನ್ನು ಕಬಳಿಸಿದ ಪ್ರಕರಣದಲ್ಲಿ ಖಾನ್ ಅವರ ಜಾಮೀನು ಅರ್ಜಿಯ ಮೇಲಿನ ಆದೇಶವನ್ನು ಅಲಹಾಬಾದ್ ಹೈಕೋರ್ಟ್ ಗುರುವಾರ ಕಾಯ್ದಿರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News