ಕಲ್ಲಿದ್ದಲು ಸಾಗಾಟಕ್ಕೆ ಅನುಕೂಲ ಕಲ್ಪಿಸಲು ಹಲವು ಪ್ರಯಾಣಿಕ ರೈಲುಗಳು ರದ್ದು

Update: 2022-05-06 09:59 GMT

ಹೊಸದಿಲ್ಲಿ: ದೇಶದಲ್ಲಿ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಕೊರತೆ ಎದುರಾದ ಹಿನ್ನೆಲೆಯಲ್ಲಿ ಕಲ್ಲಿದ್ದಲು ಸಾಗಾಟಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕಳೆದ ತಿಂಗಳಿನಿಂದ ಭಾರತೀಯ ರೈಲ್ವೆ ಇಲ್ಲಿಯ ತನಕ 42 ಪ್ಯಾಸೆಂಜರ್ ರೈಲುಗಳ 1,082 ಟ್ರಿಪ್‍ಗಳನ್ನು ರದ್ದುಗೊಳಿಸಿದೆ.

ಈ ಪೈಕಿ 40 ರೈಲುಗಳನ್ನು ಮೇ 24ರ ತನಕ ರದ್ದುಗೊಳಿಸಲಾಗಿದ್ದರೆ ಎರಡು ಇತರ ರೈಲುಗಳು ಮೇ 8ರಿಂದ ಎಂದಿನಂತೆ ಸಂಚಾರ ನಡೆಸಲಿವೆ.

ಕಳೆದ ವಾರ ಸರಕಾರ 16 ಪ್ಯಾಸೆಂಜರ್ ರೈಲುಗಳ 657 ಟ್ರಿಪ್‍ಗಳನ್ನು ರದ್ದುಗೊಳಿಸಿತ್ತು. ಇವುಗಳ ಪೈಕಿ 500 ಟ್ರಿಪ್‍ಗಳು ದೂರ ಸಂಚಾರದ ಮೈಲ್ ಮತ್ತು ಎಕ್ಸ್‍ಪ್ರೆಸ್ ರೈಲುಗಳಾಗಿವೆ.

ಶತಾಬ್ದಿ ಎಕ್ಸ್‍ಪ್ರೆಸ್ ಮತ್ತು ರಾಜಧಾನಿ ಎಕ್ಸ್‍ಪ್ರೆಸ್ ಹೊರತುಪಡಿಸಿ ಇತರ ಪ್ಯಾಸೆಂಜರ್ ರೈಲುಗಳಿಗಿಂತ ಕಲ್ಲಿದ್ದಲು ಸಾಗಾಟದ ರೈಲುಗಳಿಗೆ ಆದ್ಯತೆ ನೀಡಲಾಗುವುದು ಎಂದು ಭಾರತೀಯ ರೈಲ್ವೆ ಗುರುವಾರ ಹೇಳಿದೆ.

ರದ್ದುಗೊಂಡ 42 ರೈಲುಗಳ ಪೈಕಿ ಆಗ್ನೇಯ ರೈಲ್ವೆ ವಲಯದ 34 ರೈಲುಗಳು ಸೇರಿವೆ. ಮೇ 8ರಂದು ಕಾರ್ಯಾರಂಭಿಸಲಿರುವ ಎರಡು ರೈಲುಗಳು ಉತ್ತರ ರೈಲ್ವೆ ವಲಯದ್ದಾಗಿವೆ.

ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಸಂಗ್ರಹಣೆ ಕಡಿಮೆಯಾಗಿರುವ ಕಾರಣದಿಂದಾಗಿ ಜಮ್ಮು ಕಾಶ್ಮೀರ, ಉತ್ತರ ಪ್ರದೇಶ, ಜಾರ್ಖಂಡ್, ಮಧ್ಯ ಪ್ರದೇಶ, ರಾಜಸ್ಥಾನ, ಪಂಜಾಬ್, ಮಹಾರಾಷ್ಟ್ರ, ಬಿಹಾರ ಮತ್ತು ಆಂಧ್ರ ಪ್ರದೇಶದಲ್ಲಿ ವಿದ್ಯುತ್ ಕಡಿತ ಅನಿವಾರ್ಯವಾಗಿವೆ.

ಎಪ್ರಿಲ್ ತಿಂಗಳಿನಲ್ಲಿ ಭಾರತದಲ್ಲಿ 623 ಮಿಲಿಯನ್ ಯೂನಿಟ್ ವಿದ್ಯುತ್ ಕೊರತೆ ಎದುರಾಗಿದ್ದು  ಮಾರ್ಚ್ ತಿಂಗಳ ವಿದ್ಯುತ್ ಕೊರತೆಗಿಂತ ಇದು ಅಧಿಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News