ವ್ಯಕ್ತಿಯ ಪೌರತ್ವವನ್ನು ಒಮ್ಮೆ ಘೋಷಿಸಿದ ಬಳಿಕ ಎರಡನೇ ಬಾರಿ ವಿಚಾರಣೆಗೆ ಅವಕಾಶವಿಲ್ಲ
ಗುವಾಹಟಿ,ಮೇ 6: ಓರ್ವ ವ್ಯಕ್ತಿಯನ್ನು ಭಾರತೀಯ ಎಂದು ಘೋಷಿಸಿದ ಬಳಿಕ ನಂತರದ ಕಲಾಪಗಳಲ್ಲಿ ಆತನನ್ನು ವಿದೇಶಿ ಎಂದು ಘೋಷಿಸುವಂತಿಲ್ಲ ಎಂದು ಗುವಾಹಟಿ ಉಚ್ಚ ನ್ಯಾಯಾಲಯದ ವಿದೇಶಿಯರ ನ್ಯಾಯಾಧಿಕರಣ ಪೀಠವು ಹೇಳಿದೆ. ಪೌರತ್ವ ವಿವಾದಕ್ಕೆ ಸಂಬಂಧಿಸಿದಂತೆ ಹಲವಾರು ಪ್ರಕರಣಗಳು ದಾಖಲಾಗಿರುವ ಅಸ್ಸಾಮಿನಲ್ಲಿ ಇದೊಂದು ಮಹತ್ವದ ತೀರ್ಪು ಆಗಿದೆ.
ವ್ಯಕ್ತಿಯ ಪೌರತ್ವಕ್ಕೆ ಸಂಬಂಧಿಸಿದಂತೆ ವಿದೇಶಿಯರ ನ್ಯಾಯಾಧಿಕರಣದ ಅಭಿಪ್ರಾಯವು ‘ರೆಸ್ ಜ್ಯುಡಿಕೇಟಾ (ಪೂರ್ವ ನ್ಯಾಯ)’ದಂತೆ ಕಾರ್ಯಾಚರಿಸುತ್ತದೆ ಎಂದು ನ್ಯಾಯಮೂರ್ತಿಗಳಾದ ಎನ್.ಕೋಟಿಶ್ವರ ಸಿಂಗ್ ಮತ್ತು ನಾನಿ ತಾಗಿಯಾ ಅವರ ಪೀಠವು ಹೇಳಿತು. ಪ್ರಕರಣವೊಂದರಲ್ಲಿ ನ್ಯಾಯಾಲಯವು ತನ್ನ ಅಂತಿಮ ತೀರ್ಪನ್ನು ನೀಡಿದ ಬಳಿಕ ಅದೇ ಕಕ್ಷಿದಾರರು ಅದೇ ವಿಷಯದಲ್ಲಿ ಮತ್ತೆ ದಾವೆ ಹೂಡುವಂತಿಲ್ಲ ಎಂದು ಕಾನೂನಿನ ತತ್ತ್ವವು ಹೇಳುತ್ತದೆ.
ತಮ್ಮನ್ನು ಮೊದಲು ಭಾರತೀಯ ಪ್ರಜೆಗಳೆಂದು ಘೋಷಿಸಲಾಗಿತ್ತು,ಆದರೆ ನಂತರ ವಿದೇಶಿಯರೆಂದು ಘೋಷಿಸಲಾಗಿದೆ ಎಂದು ದೂರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ಸಂದರ್ಭ ನ್ಯಾಯಾಧೀಶರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಎರಡು ಪೌರತ್ವ ಸಂಬಂಧಿತ ತೀರ್ಪುಗಳ ಕುರಿತು ಗೊಂದಲವುಂಟಾದ ಬಳಿಕ ನ್ಯಾಯಾಲಯವು ಪೂರ್ವ ನ್ಯಾಯ ತತ್ತ್ವದ ಕುರಿತು ಸ್ಪಷ್ಟೀಕರಣವನ್ನು ನೀಡಿತು.
ಅಮೀನಾ ಖಾತೂನ್ ಎನ್ನುವುವರು ಹೂಡಿದ್ದ ಪೌರತ್ವ ದಾವೆಯಲ್ಲಿ ಗುವಾಹಟಿ ಉಚ್ಚ ನ್ಯಾಯಾಲಯವು,ಸ್ಪಷ್ಟ ಅರ್ಥದಲ್ಲಿ ವಿದೇಶಿಯರ ನ್ಯಾಯಾಧಿಕರಣವು ನ್ಯಾಯಾಲಯವಲ್ಲ,ಹೀಗಾಗಿ ಅದರ ವಿಚಾರಣೆಗಳನ್ನು ನ್ಯಾಯಾಂಗ ಪ್ರಕ್ರಿಯೆಗಳೆಂದು ಪರಿಗಣಿಸಲಾಗುವುದಿಲ್ಲ. ಆದ್ದರಿಂದ ವಿದೇಶಿಯರ ಕಾಯ್ದೆ ಮತ್ತು ವಿದೇಶಿಯರ ನ್ಯಾಯಾಧಿಕರಣದ ಆದೇಶದಡಿ ಪೂರ್ವ ನ್ಯಾಯ ತತ್ತ್ವವನ್ನು ಅನ್ವಯಿಸುವಂತಿಲ್ಲ ಎಂದು ಎತ್ತಿ ಹಿಡಿದಿತ್ತು. ಆದರೆ ಅಬ್ದುಲ್ ಕುದ್ದೂಸ್ ಎನ್ನುವವರು ಹೂಡಿದ್ದ ಇನ್ನೊಂದು ದಾವೆಯಲ್ಲಿ ಸರ್ವೋಚ್ಚ ನ್ಯಾಯಾಲಯವು,ವಿದೇಶಿಯರ ನ್ಯಾಯಾಧಿಕರಣವು ಪೂರ್ವ ನ್ಯಾಯ ತತ್ತ್ವವನ್ನು ಅನ್ವಯಿಸಿ ವ್ಯಕ್ತಿಯ ಪೌರತ್ವವನ್ನು ನಿರ್ಧರಿಸಿ ಆದೇಶವನ್ನು ಹೊರಡಿಸಿದ್ದರೆ ಅದೇ ವ್ಯಕ್ತಿಯ ವಿರುದ್ಧದ ನಂತರದ ಕಲಾಪಗಳಲ್ಲಿ ಈ ನಿರ್ಧಾರವು ಬಂಧಕವಾಗಿರುತ್ತದೆ ಮತ್ತು ಆತನ ಪೌರತ್ವವನ್ನು ಮರುನಿರ್ಧರಿಸಲು ಇನ್ನೊಂದು ವಿಚಾರಣೆ ನಡೆಸುವಂತಿಲ್ಲ ಎಂದು ಎತ್ತಿ ಹಿಡಿದಿತ್ತು.